ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.)

Leaf
Leaf

45ನೇ ವರ್ಷದ ಗಣೇಶೋತ್ಸವ – ವೈಭವದ ಶೋಭಾಯಾತ್ರೆ

ಪುತ್ತೂರು ನೆಹರು ನಗರದ ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ವತಿಯಿಂದ 45ನೇ ವರ್ಷದ ಗಣೇಶೋತ್ಸವ ಸಂಭ್ರಮ ವಿಜೃಂಭಣೆಯಿಂದ ನಡೆಯಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ವಿದ್ಯಾಸಂಸ್ಥೆಗಳು ಜೊತೆಯಾಗಿ ಸೆ.14 ರಿಂದ ಸೆ.16ರವರೆಗೆ ಕಾಲೇಜಿನ ಕೇಶವ ಸಂಕಲ್ಪ ಸಭಾಭವನಲ್ಲಿ ಗಣೇಶೋತ್ಸವವನ್ನು ಆಚರಿಸಲಾಯಿತು.
ಈ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಧಾರ್ಮಿಕ ಉಪನ್ಯಾಸವನ್ನು ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ಅಖಿಲ ಭಾರತೀಯ ಸಾಹಿತ್ಯ ಪರಿಷದ್‍ನ ಕಾರ್ಯದರ್ಶಿ ಲತೇಶ್ ಬಾಕ್ರಬೈಲು ಮಾತನಾಡಿ, ಸಮಾಜದಲ್ಲಿರುವ ನೂರಾರು ಒಡಕುಗಳನ್ನು ದೂರಗೊಳಿಸಿ, ಪ್ರತಿಯೊಬ್ಬರನ್ನು ಒಂದುಗೂಡಿಸುವ ಉದ್ದೇಶದಿಂದ ಆಚರಣೆಗೆ ಬಂದ ಹಬ್ಬ ಚೌತಿ. ರಾಷ್ಟ್ರೀಯತೆ ಮತ್ತು ಧರ್ಮ ಒಂದೇ ಎಂದು ನಂಬಿದ ಪರಂಪರೆ ಭಾರತದ್ದು. ತ್ಯಾಗ ಪರಂಪರೆಯನ್ನು ಹೊಂದಿರುವ ಭಾರತೀಯರು ಸಮಾಜಕ್ಕಾಗಿ ಧಾರ್ಮಿಕತೆಯ ನಡುವೆ ಬದುಕಿದವರು. ಇದರಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಪಂಚ ಪರಿವರ್ತನೆ ಎಂಬ ವಿಷಯ. ಅದು ನಮ್ಮ ಮನೆಗಳಿಂದಲೇ ಆರಂಭವಾದಾಗ ಮಾತ್ರ ಸಮಾಜ ಮತ್ತು ದೇಶ ಬೆಳೆಯಲು ಸಾಧ್ಯ ಎಂದು ಹೇಳಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರೀಯ ಮತ್ತು ಹಿಂದೂ ಧಾರ್ಮಿಕತೆಯ ಕೊರತೆಯನ್ನು ನೀಗಿಸಿ, ಧಾರ್ಮಿಕ ಪದ್ಧತಿಗಳನ್ನು ಉಳಿಸಿಕೊಳ್ಳಲು ಚೌತಿ ಆಚರಣೆ ಒಂದು ಉತ್ತಮ ದಾರಿ. ರಾಷ್ಟ್ರೀಯ ಜಾಗೃತಿಯ ಚಿಂತನೆಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿದಾಗ ಪರಿವರ್ತನೆಯ ಆಶಯಗಳು ಸುಲಭವಾಗಿ ತಲುಪುತ್ತವೆ. ವಿದ್ಯಾರ್ಥಿಗಳಲ್ಲಿ ಧಾರ್ಮಿಕ ನಂಬಿಕೆ ಮತ್ತು ಧರ್ಮದ ಭಾವನೆಯನ್ನು ಬೆಳೆಸುವಲ್ಲಿ ಗಣೇಶೋತ್ಸವ ಒಂದು ಪ್ರಮುಖ ಆಚರಣೆಯಾಗಿ ಪಾತ್ರ ವಹಿಸಿದೆ ಎಂದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯ ನಾರಾಯಣ ಕೆ.ಎಂ, ವಿವೇಕಾನಂದ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ, ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪೆÇ್ರ. ಶ್ರೀಕೃಷ್ಣ ಗಣರಾಜ್ ಭಟ್, ವಿವೇಕಾನಂದ ಶ್ರೀ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಂಗ್ಲ ವಿಭಾಗದ ಉಪನ್ಯಾಸಕ ಪರಮೇಶ್ವರ ಶರ್ಮಾ ಪಿ.ಕೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿವೇಕಾನಂದ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮನಮೋಹನ ಎಂ. ಸ್ವಾಗತಿಸಿ, ತೃತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದೀಪ್ತಿ ಪ್ರಭು ಪ್ರಾರ್ಥಿಸಿದರು. ವಿವೇಕಾನಂದ ಪದವಿ ಕಾಲೇಜಿನ ಭಾರತೀಯ ಸಂಸ್ಕøತಿ ಮತ್ತು ಲಲಿತಕಲಾ ಅಧ್ಯಯನ ಕೇಂದ್ರದ ಸಂಯೋಜಕಿ ಹಾಗೂ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ವಿದ್ಯಾ ಎಸ್. ವಂದಿಸಿ, ತೃತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅವನಿ ಕೆ. ಮತ್ತು ಸುಮನಾ ನಿರೂಪಿಸಿದರು.
ಗಣಪತಿ ಹವನ, ರಂಗಪೂಜೆ, ಸರ್ವಸೇವೆ, ಮಹಾಪೂಜೆ, ಹರಕೆ ಸೇವೆ, ವಿದ್ಯಾರಕ್ಷೆ, ಕರ್ಪೂರಾರತಿ ಸೇವೆಗಳು ನಡೆದವು. ಭಕ್ತರು ಗಣೇಶನಿಗೆ ಸ್ವಯಂ ಆರತಿ ಬೆಳಗುವ ಅವಕಾಶ ಕಲ್ಪಿಸಲಾಗಿತ್ತು.
ಮೂರು ದಿನಗಳ ಕಾಲ ನಡೆದ ಈ ಆಚರಣೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜು, ತೆಂಕಿಲ ವಿವೇಕಾನಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ, ಅರ್ಕ ಕೊಡಿಪ್ಪಾಡಿ ಮಹಾದೇವಿ ಭಜನಾ ಮಂಡಳಿ, ಕುಂಟ್ಯಾನ ಭ್ರಾಮರಿ ಭಜನಾ ತಂಡ, ವಿವೇಕಾನಂದ ಇನ್‍ಸ್ಟಿಟ್ಯೂಟ್ ಆಫ್ ಫಾರ್ಮಾಟಿಕಲ್ ಸೈನ್ಸಸ್, ವಿವೇಕಾನಂದ ಪದವಿ ಕಾಲೇಜು (ಸ್ವಾಯತ್ತ), ಪಡ್ಡಾಯೂರು ಅನ್ನಪೂರ್ಣೇಶ್ವರಿ ಭಜನಾ ಮಂಡಳಿ, ಕಬಕ ಶ್ರೀ ಮಹಾದೇವಿ ಮಹಿಳಾ ಮಂಡಳಿ, ವಿವೇಕಾನಂದ ಕಾಲೇಜು ಆಫ್ ಇಂಜಿನಿಯರ್ ಆ್ಯಂಡ್ ಟೆಕ್ನಾಲಜಿ, ವಿವೇಕಾನಂದ ಕಾನೂನು ಮಹಾವಿದ್ಯಾಲಯ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು, ತೆಂಕಿಲ ನರೇಂದ್ರ ಪದವಿ ಪೂರ್ವ ಕಾಲೇಜುಗಳಿಂದ ವಿವಿಧ ಸಾಂಸ್ಕøತಿಕ ಮತ್ತು ಭಜನಾ ಕಾರ್ಯಕ್ರಮಗಳು ನಡೆದವು.
ವೇದಿಕೆಯಲ್ಲಿ ವಿವೇಕಾನಂದ ಪದವಿ ಪತ್ರಿಕೋದ್ಯಮ ವಿಭಾಗದ ಪ್ರಾಯೋಗಿಕ ಪತ್ರಿಕೆ ವಿಕಸನ ಮತ್ತು ಸ್ನಾತಕೋತ್ತರ ಸಂಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿಕಾಸ ಪ್ರಾಯೋಗಿಕ ಪತ್ರಿಕೆ ಮತ್ತು ವಿನೂತನ ಪಾಕ್ಷಿಕ ಪತ್ರಿಕೆಯ ಗಣೇಶೋತ್ಸವದ ವಿಶೇಷ ಸಂಚಿಕೆಗಳನ್ನು ಬಿಡುಗಡೆಗೊಳಿಸಲಾಯಿತು.

ರೀಲ್ಸ್ ಮೇಕಿಂಗ್ ಸ್ಪರ್ಧೆ
45ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಆಯೋಜಿಸಿದ್ದ ರೀಲ್ಸ್ ಮೇಕಿಂಗ್ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿನಿ ಸಹನಾ ಕೋಲ್ಪೆ (ಪ್ರಥಮ), ಸ್ವಸ್ತಿಕ್.ಎಂ (ದ್ವಿತೀಯ) ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ಸುಮಂತ್ ಪಿ.(ತೃತೀಯ) ಸ್ಥಾನ ಪಡೆದರು. ಅನಿಮೇಟೆಡ್ ರೀಲ್ಸ್ ಸ್ಪರ್ಧೆಯಲ್ಲಿ ಹರ್ಷಿತ್ ಎಂ.ಬಿ ಪ್ರಥಮ ಸ್ಥಾನ ಪಡೆದುಕೊಂಡರು.

ಪುಸ್ತಕ ಹಬ್ಬ
ಮುಖ್ಯ ಆಕರ್ಷಣೆಯಾಗಿ ಮಂಗಳೂರು ಸಾಹಿತ್ಯ ಕೇಂದ್ರದ ಆಶ್ರಯದಲ್ಲಿ ಪುಸ್ತಕ ಹಬ್ಬ ನಡೆಯಿತು. ಇಲ್ಲಿ ಮಕ್ಕಳ ಸಣ್ಣ ಕತೆಗಳು, ತುಳುನಾಡಿನ ಐತಿಹಾಸಿಕ ಕಥೆ ಪುಸ್ತಕಗಳು, ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಹೀಗೆ 330ಕ್ಕಿಂತಲೂ ಹೆಚ್ಚಿನ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಈ ಪುಸ್ತಕ ಹಬ್ಬಕ್ಕೆ ವಿದ್ಯಾರ್ಥಿಗಳಿಂದ, ಶಿಕ್ಷಕರಿಂದ ಹಾಗೂ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ದೊರಕಿತು.

ಶೋಭಾ ಯಾತ್ರೆ
ಸೆ.16ರಂದು ಸಂಜೆ ಗಣಪತಿಯ ಶೋಭಾ ಯಾತ್ರೆಯೂ ನಗರದ ವಿವೇಕಾನಂದ ಕ್ಯಾಂಪಸ್‍ನಿಂದ ಆರಂಭಗೊಂಡು ಬೊಳುವಾರು ಮಾರ್ಗವಾಗಿ ಸಾಗಿ ಹಾರಾಡಿಯಲ್ಲಿ ಗಣೇಶನ ಮೂರ್ತಿಯನ್ನು ವಿಸರ್ಜನೆಗೊಳಿಸುವ ಮೂಲಕ ಗಣೇಶೋತ್ಸವ ಸಂಪನ್ನಗೊಂಡಿತು. ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವಿಧ ವಿದ್ಯಾಸಂಸ್ಥೆಗಳ 7000ಕ್ಕೂ ಅಧಿಕ ವಿದ್ಯಾರ್ಥಿಗಳು ಭವ್ಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು. ವಿದ್ಯಾರ್ಥಿ ತಂಡಗಳಿಂದ ಚಂಡೆ, ಕುಣಿತ ಭಜನೆ, ಹುಲಿವೇಷ, ಟ್ಯಾಬ್ಲೋ ಹಾಗೂ ಹಲವು ವಾದನಗಳೊಂದಿಗೆ ಗಣಪತಿಯ ಮೆರವಣಿಗೆ ಸಾಗಿತು.

Leave a Reply

Your email address will not be published. Required fields are marked *

Related News

News
18/08/2026

80 ನೇ ವರ್ಷದ ಸ್ವಾತಂತ್ರ್ಯೋತ್ಸವ ದಿನಾಚರಣೆ- ಧ್ವಜಾರೋಹಣ

News
21/07/2026

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ.) ಅಧ್ಯಕ್ಷರಾಗಿ ಕೃಷ್ಣಕುಮಾರ್ ಶೆಟ್ಟಿ ಕಡಬ, ಕಾರ್ಯದರ್ಶಿಯಾಗಿ ವಿಜಯನಾರಾಯಣ ಕೆ.ಎಂ. ಆಯ್ಕೆ

News, News and Events
02/07/2026

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ.) ಸಂಸ್ಥೆಗಳಲ್ಲಿ ವಿಶ್ವ ಯೋಗ ದಿನಾಚರಣೆ