
ದಿನಾಂಕ ೧೪.೨.೨೦೨೫ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ಕೆಡ್ಡಸ ಹಬ್ಬ ಆಚರಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ತುಳಸಿಕಟ್ಟೆಯ ಮುಂದೆ ಗೋಮಯದಿಂದ ಶುದ್ಧೀಕರಿಸಿ, ಭೂಮಿ ದೇವಿಯ ಸಾನಿಧ್ಯ ರಚಿಸಿ, ದೀಪಹಚ್ಚಿ, ಮಣೆಯ ಮೇಲೆ ಎಣ್ಣೆ, ಸೀಗೆಕಾಯಿ, ಅರಶಿನ – ಕುಂಕುಮ, ಪಚ್ಚೆ ಹಸಿರಿನ ಹುಡಿ, ವೀಳ್ಯದೆಲೆ ಇತ್ಯಾದಿಗಳನ್ನು ಭೂಮಿ ದೇವಿಯ ಸ್ನಾನಕೋಸ್ಕರ ಇಟ್ಟು ಹುರುಳಿ, ಹೆಸರುಕಾಳು, ಒಣಕೊಬ್ಬರಿ, ಕಡಲೆಕಾಯಿಗಳ ಮಿಶ್ರಣ(ನನ್ನೇರಿ) ಇದರೊಂದಿಗೆ ತುಳುನಾಡಿನ ವಿವಿಧ ಭಕ್ಷö್ಯಗಳನ್ನು ಹಿರಿಯ ತಾಯಂದಿರು ಭೂಮಿಗೆ ಎಣ್ಣೆ ಹಾಲು ಹಾಕಿ ಬಡಿಸಿದರು. ವಿದ್ಯಾರ್ಥಿಗಳು ಸುತ್ತ ನಿಂತು ಈ ಕಾರ್ಯಕ್ರಮ ವೀಕ್ಷಿಸಿದರು.
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಅನ್ನಪೂರ್ಣ ಕೆಡ್ಡಸದ ಮಹತ್ವ ತಿಳಿಸುತ್ತಾ, “ನಮ್ಮ ದೇಶದ ಭಾಷೆ, ಸಂಸ್ಕಾರ, ಸಂಸ್ಕೃತಿ ಭಿನ್ನವಾಗಿದೆ. ಪರಶುರಾಮ ಸೃಷ್ಟಿಯ ಈ ತುಳುನಾಡಿನಲ್ಲಿ ಆಚರಿಸುವ ಹಬ್ಬವಾಗಿದೆ. ಪೂರ್ವಿಕರು ಭೂಮಿಯನ್ನು ಹೆಣ್ಣೆಂದೇ ಪರಿಗಣಿಸಿ ಆರಾಧಿಸಿದವರು. ಹೆಣ್ಣಿನಂತೆ ಭೂಮಿಯು ಮುಟ್ಟಾಗುತ್ತಾಳೆಂದು ಪರಿಗಣಿಸಿ, ಆ ನಂಬಿಕೆಯ ಪ್ರಕಾರ ಅವಳನ್ನು ಮಡಿಗೊಳಿಸುವ ದಿನವೆಂದು ಈ ಆಚರಣೆಯನ್ನು ನಡೆಸುತ್ತಾರೆ. ಕೆಡ್ಡಸ ಹಬ್ಬವನ್ನು ಶುರು ಕೆಡ್ಡಸ, ನಡುಕೆಡ್ಡಸ ಹಾಗೂ ಕಡೆ ಕೆಡ್ಡಸ ಎಂದು ಮೂರು ದಿನ ಆಚರಿಸುತ್ತಾರೆ. ಈ ಮೂರು ದಿನ ನಡೆಯುವ ಹಬ್ಬದ ಆಚರಣೆಯಲ್ಲಿ ನೆಲ ಅಗೆಯುವುದು, ಮರಗಳನ್ನು ಕಡೆಯುವುದು ನಿಷಿದ್ಧ. ಯಾಕೆಂದರೆ ಭೂಮಿ ರಜೋಮಯವಾಗಿರುವುದರಿಂದ ಕೃಷಿ ಕಾರ್ಯದಲ್ಲಿ ತೊಡಗಿದರೆ ಭೂಮಿಗೆ ನೋವಾಗುತ್ತದೆ ಎಂಬ ನಂಬಿಕೆಯಿದೆ. ಕೆಡ್ಡಸದ ಸಮಯದಲ್ಲಿ ಮೂಡಣ ದಿಕ್ಕಿನಿಂದ ಒಂದು ವಿಲಕ್ಷಣವಾದ ಗಾಳಿ ಬೀಸುತ್ತದೆ. ಇದನ್ನು ಕೆಡ್ಡಸದ ಗಾಳಿ ಎಂದು ಕರೆಯುತ್ತಾರೆ. ಈ ಸಂದರ್ಭ ಋತುಸ್ನಾನ ಮುಗಿಸಿರುವ ಭೂಮಿದೇವಿಯ ಈ ಗಾಳಿಯಿಂದ ಪುಲಕಗೊಂಡು ಫಲವತಿಯಾಗಲು ಸಜ್ಜಾಗುತ್ತಾಳೆ ಎಂಬ ನಂಬಿಕೆಯಿದೆ. ಇಂತಹ ಆಚರಣೆಗಳಿಂದ ಮಕ್ಕಳಲ್ಲಿ ಪ್ರಕೃತಿ ಆರಾಧನೆ ಮತ್ತು ಕಾಳಜಿ ಎಳವೆಯಲ್ಲಿಯೇ ಮೂಡುತ್ತದೆ” ಎಂದು ತಿಳಿಸಿದರು.
ನಂತರ ಕಾರ್ಯಕ್ರಮದಲ್ಲಿ ಮಾನಸ ಹಾಗೂ ತಂಡ ಕೆಡ್ಡಸ ಕುರಿತಾದ ಹಾಡನ್ನು ಹಾಡಿದರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ನನ್ನೇರಿಯನ್ನು ಹಂಚಲಾಯಿತು.
ವೇದಿಕೆಯಲಿ ರಾಷ್ಟçಸೇವಿಕಾ ಸಮಿತಿಯ ಕರ‍್ಯಕಾರಿಣೀ ಸದಸ್ಯರಾದ ಡಾ| ಕಮಲಾ ಪ್ರಭಾಕರ ಭಟ್ , ಊರಿನ ಹಿರಿಯ ಮಾತೃಶ್ರೀಯಾವರಾದ ಕಲಾವತಿ, ಜಯಂತಿ, ಕಾಮಿನಿ, ನಿರ್ಮಲಾ ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಚಿನ್ಮಯಿ ಶೆಟ್ಟಿ ಸ್ವಾಗತಿಸಿ, ಹೃಷಿಕ ನಿರೂಪಿಸಿ, ವರ್ಷ ವಂದಿಸಿದರು.

