ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಕಲ್ಲಡ್ಕ ಇಲ್ಲಿ ದಿನಾಂಕ 25-07-2015 ರಂದು ವಿದ್ಯಾರ್ಥಿಗಳ ಸಾಮೂಹಿಕ ಹುಟ್ಟುಹಬ್ಬ ಹಾಗೂ ಭಜನೆ ಕಾರ್ಯಕ್ರಮ ನಡೆಯಿತು. ಹುಟ್ಟುಹಬ್ಬ ಆಚರಿಸುತ್ತಿರುವ ಮಕ್ಕಳಿಗೆ ಮಾತಾಜಿಯವರು ಆರತಿ ಮಾಡಿ ಅಕ್ಷತೆ ಹಾಕಿ ತಿಲಕ ಇಟ್ಟು ಆಶೀರ್ವದಿಸಿದರು.
ಕಾರ್ಯಕ್ರಮದ ಅತಿಥಿಗಳಾದ ನೆಟ್ಲ ಸರಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀಯುತ ಪ್ರವೀಣ್ ಇವರು ಮಾತನಾಡುತ್ತಾ ಸಾಮೂಹಿ ಹುಟ್ಟುಹಬ್ಬ ಆಚರಿಸಿ ಅನಗತ್ಯ ಖರ್ಚನ್ನು ಉಳಿಸಿ ನಿಧಿ ಸಮರ್ಪಣೆ ಮಾಡುವ ಮೂಲಕ ನಿರಾಶ್ರಿತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನೆರವಾಗುವುದು ಉತ್ತಮ ಕಾರ್ಯ ಎಲ್ಲರೂ ಅನಾವಶ್ಯಕ ದುಂದು ವೆಚ್ಚವನ್ನು ಸಮಾಜದ ಕಾರ್ಯದಲ್ಲಿ ವಿನಿಯೋಗಿಸಿದರೆ ನಮ್ಮ ದೇಶ ಒಂದು ಉನ್ನತ ಮಟ್ಟಕ್ಕೆ ಏರುವುದರಲ್ಲಿ ಸಂಶಯವಿಲ್ಲ ಎಂದು ನುಡಿದರು.
ಇನ್ನೋರ್ವ ಅತಿಥಿಯಾದ ಶ್ರೀರಾಮ ಶಾಲೆಯ ಹಳೆಯ ವಿದ್ಯಾರ್ಥಿನಿಯಾದ ರಾಷ್ಟ್ರಮಟ್ಟದ ಕ್ರೀಡಾಪಟು ಹಾಗೂ ಇಂಜಿನಿಯರ್ ಪದವಿಯನ್ನು ಪಡೆದು ಪ್ರಸ್ತುತ ದೆಹಲಿಯಲ್ಲಿ ವಾಸ್ತವ್ಯ ಮಾಡುತ್ತಿರುವ ಶ್ರೀಮತಿ ಶುಭಲಕ್ಷ್ಮೀ ಇವರು ತಮ್ಮ ಪ್ರಾಥಮಿಕ ಶಾಲಾದಿನಗಳನ್ನು ನೆನಪಿಸುತ್ತಾ ಹುಟ್ಟುಹಬ್ಬ ಆಚರಿಸುವ ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಪ್ರಗತಿಪರ ಕೃಷಿಕರಾದ ಶ್ರೀ ಗಿಲ್ಕಿಂಜ ಕೃಷ್ಣಭಟ್ ಹಾಗೂ ಮುಖ್ಯೋಪಾಧ್ಯಾಯರಾದ ಶ್ರೀ ರವಿರಾಜ್ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಗೀತಾ ಮಾತಾಜಿ ನಿರೂಪಿಸಿ, ತೇಜಾಕ್ಷಿ ಮಾತಾಜಿ ಸ್ವಾಗತಿಸಿ, ರವಿರಾಜ್ ಶ್ರೀಮಾನ್ ಧನ್ಯವಾದಗೈದರು.