ಯುವ ಜನತೆಯನ್ನು ಧ್ಯೇಯವಾಗಿಟ್ಟುಕೊಂಡು ಆರಂಭವಾದ ಯೋಜನೆಯೇ ರಾಷ್ಟ್ರೀಯ ಸೇವಾಯೋಜನೆ. ದೇವಸ್ಥಾನದಲ್ಲಿ ಉಳಿ ಪೆಟ್ಟು ತಿಂದ ಕಲ್ಲು ಹೇಗೆ ಒಂದು ಸುಂದರ ಶಿಲೆಯಾಗಿ ರೂಪುಗೊಂಡು ಎಲ್ಲರೂ ಪೂಜಿಸುವಂತಾಗುತ್ತದೆಯೋ ಹಾಗೆಯೇ ವಿದ್ಯಾರ್ಥಿಗಳು ತಮ್ಮನ್ನು ತಾವು ಎನ್.ಎಸ್.ಎಸ್.ನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಸವಾಲುಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ಆದರ್ಶ ವಿದ್ಯಾರ್ಥಿಯಾಗಿ ಸಮಾಜದಲ್ಲಿ ಗುರುತಿಸುವಂತಾಗಬೇಕು. ಅವಕಾಶಗಳನ್ನು ಜೀವನದಲ್ಲಿ ಉಪಯೋಗಿಸಿದಲ್ಲಿ ಅವರು ಮುಂದೆ ಉತ್ತಮ ವ್ಯಕ್ತಿಗಳಾಗುತ್ತಾರೆ ಎಂದು ಎಸ್.ವಿ.ಎಸ್ ಕಾಲೇಜಿನ ಕನ್ನಡ ಉಪನ್ಯಾಸಕ ಕಿಟ್ಟು ರಾಮಕುಂಜ ಹೇಳಿದರು.
ಇವರು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಮಹಾವಿದ್ಯಾಲಯದ 2015-16 ನೇ ಸಾಲಿನ ಕಾಲೇಜಿನ ಎನ್.ಎಸ್.ಎಸ್. ಘಟಕವನ್ನು ದೀಪಬೆಳಗಿಸುವುದರ ಮೂಲಕ ಉದ್ಘಾಟನೆಗೈದು ಮಾತನಾಡಿದರು.
ಶ್ರೀರಾಮ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ವಸಂತ ಬಲ್ಲಾಳ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಶ್ರೀರಾಮ ಪ್ರಥಮದರ್ಜೆ ಕಾಲೇಜಿನ ಪ್ರಾಚಾರ್ಯರಾದ ಕೃಷ್ಣಪ್ರಸಾದ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್.ನ ವಿದ್ಯಾರ್ಥಿಗಳು ದೇಶಭಕ್ತಿಗೀತೆಯನ್ನು ಹಾಡಿದರು. ಎನ್.ಎಸ್.ಎಸ್.ನ ಸಂಯೋಜನಾಧಿಕಾರಿಯಾದ ಅರ್ಥಶಾಸ್ತ್ರ ಉಪನ್ಯಾಸಕ ಹರೀಶ್ ವಿಟ್ಲ ಸ್ವಾಗತಿಸಿ, ರಾಜಕೀಯಶಾಸ್ತ್ರ ಉಪನ್ಯಾಸಕಿ ಸುನೀತಾ ವಂದಿಸಿ, ಸ್ವಾತಿ ಕಾರ್ಯಕ್ರಮ ನಿರ್ವಹಿಸಿದರು.