ಮೌಲ್ಯಯುತ, ಸಂಸ್ಕಾರಯುತ ಶಿಕ್ಷಣಕ್ಕೆ ಪ್ರಾಧಾನ್ಯತೆ ಹೆಚ್ಚು. ಇಂದು ಕರ್ನಾಟಕದಲ್ಲಿಯೇ ಸುಮಾರು 2 ಲಕ್ಷಕ್ಕೂ ಮೀರಿ ವಿದ್ಯಾರ್ಥಿಗಳು ವಾಣಿಜ್ಯಶಾಸ್ತ್ರ ಅಭ್ಯಾಸ ಮಾಡುತ್ತಿದ್ದಾರೆ.
ಪದವಿ ಶಿಕ್ಷಣ ಮುಗಿಸಿದ ನಂತರ ಮುಂದೇನು? ಎಂಬ ಪ್ರಶ್ನೆ ಕಾಡುವುದು ಸಹಜ ಆ ನಿಟ್ಟಿನಲ್ಲಿ ಅವರ ಮುಂದಿನ ಶಿಕ್ಷಣಕ್ಕೆ ಪೂರಕವಾಗಿರುವ ವೃತ್ತಿ ಶಿಕ್ಷಣದ ತರಬೇತಿ ಕೊಡುವ ವಿವಿಧ ಕಾರ್ಯಕ್ರಮ ಮಾಡಿದಾಗ ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು.
ಹಣ ಸಂಪಾದನೆ ಮಾತ್ರ ಮೂಲ ಮಂತ್ರವಾಗದೆ ಸಾಮಾಜಿಕ ದೃಷ್ಟಿಕೋನದಿಂದಲೂ ವಿದ್ಯಾರ್ಥಿಗಳ ಯೋಚನೆ ಮಾಡುವವರಾಗಬೇಕು ಎಂದು ಉಪ್ಪಿನಂಗಡಿ ಪದವಿಪೂರ್ವ ವಿದ್ಯಾಲಯದ ಲೋಕೇಶ್‌ನಾಥ್ ಹೇಳಿದರು.
ಅವರು ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಭೋಧ ವಾಣಿಜ್ಯ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಾಣಿಜ್ಯದ ಬೇರೆ ಬೇರೆ ವಿಭಾಗದಲ್ಲಿ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು. ಒಂದೇ ಕ್ಷೇತ್ರದಲ್ಲಿ ಎಲ್ಲರೂ ಮುನ್ನುಗ್ಗಿದರೆ, ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗದ ಅಭಾವ ಕಂಡುಬರುತ್ತದೆ. ಆದ್ದರಿಂದ ಐ.ಎ.ಎಸ್., ಐ.ಪಿ.ಎಸ್. ಕ್ಷೇತ್ರದಲ್ಲಿಯೂ ವಿದ್ಯಾರ್ಥಿಗಳು ಮುಂದುವರಿಯಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಸಿ.ಇ.ಒ ವಸಂತ ಮಾಧವ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸ್ವದೇಶಿ ವಿಷಯದ ಬಗ್ಗೆ ಚಿಂತನೆಯು ಬೆಳೆಯಬೇಕು. ಸಾಮಾಜಿಕ ಜವಾಬ್ಧಾರಿಯನ್ನು ವಹಿಸಿಕೊಳ್ಳಬೇಕು ಆಗ ಮಾತ್ರ ನಮ್ಮ ದೇಶದಲ್ಲಿ ಇನ್ನು ಕಂಪೆನಿಗಳು ತಲೆ ಎತ್ತುವುದು ಎಂದರು.
ವೇದಿಕೆಯಲ್ಲಿ ಪ್ರಾಂಶುಪಾಲ ಕೃಷ್ಣಪ್ರಸಾದ ಹಾಗೂ ವಾಣಿಜ್ಯ ಉಪನ್ಯಾಸಕಿ ಸೌಮ್ಯಶ್ರೀ ಜೆ. ಉಪಸ್ಥಿತರಿದ್ದರು. ವಿದ್ಯಾರ್ಥಿ ನಿಶಾ ಕುಮಾರಿ ಸ್ವಾಗತಿಸಿ, ಸೂರಜ್ ವಂದಿಸಿ ನಿತಿನ್ ಕುಮಾರ್ ಕಾರ್ಯಕ್ರಮ ವಂದಿಸಿದರು.