
ಪುತ್ತೂರು : ಪುತ್ತೂರಿನಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣವನ್ನು ನೀಡುವ ಗುರಿಯನ್ನು ಇರಿಸಿಕೊಂಡು 1986ರಲ್ಲಿ ಸ್ಥಾಪನೆಗೊಂಡ ವಿವೇಕಾನಂದ ಪಾಲಿಟೆಕ್ನಿಕ್ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಹೆಮ್ಮೆಯ ಅಂಗಸಂಸ್ಥೆಯಾಗಿದೆ. ಈ ಸಂಸ್ಥೆಯ ಸ್ಥಾಪನೆ ಹಾಗೂ ಅಭಿವೃದ್ಧಿಗೆ ಕಾರಣೀಭೂತರಾದ ಹಿರಿಯರಾದ ಉರಿಮಜಲು ಕೆ. ರಾಮ ಭಟ್ಟರ ಸವಿನೆನಪಿಗಾಗಿ 2025 ನೇ ಜುಲೈ 2ರಂದು ಕಾಲೇಜಿನಲ್ಲಿ ನವೀಕೃತ ಉರಿಮಜಲು ಕೆ. ರಾಮ ಭಟ್ ಸಭಾಂಗಣದ ಲೋಕಾರ್ಪಣೆ ಕಾರ್ಯಕ್ರಮ ಹಾಗೂ ಜೊತೆಯಲ್ಲಿ ಪಾಲಿಟೆಕ್ನಿಕ್ ನ ಪ್ರಥಮ ವರ್ಷದ ವಿದ್ಯಾರ್ಥಿಗಳ ಪ್ರಾರಂಭೋತ್ಸವವನ್ನು ಕೂಡ ನಡೆಸಲಾಯಿತು .
ಭಾರತ ಮಾತೆಗೆ ಪುಷ್ಪಾರ್ಚನೆಗೈದು ಪ್ರಾರಂಭಗೊಂಡ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀರಘುನಾಥರಾವ್ ಮಾಲಕರು ರಾಜೇಶ್ ಪವರ್ ಪ್ರೆಸ್ ಪುತ್ತೂರು ನೂತನವಾಗಿ ನವೀಕರಿಸಿದ ಉರಿಮಜಲು ಕೆ ರಾಮ ಭಟ್ ಸಭಾಂಗಣದ ಉದ್ಘಾಟನೆಯನ್ನು ಮಾಡಿದರು. ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ “ಇದೀಗ ಈ ಸಭಾಂಗಣದಲ್ಲಿ ರಾಮನ ಪ್ರಾಣ ಪ್ರತಿಷ್ಠೆ ಆಗಿದೆ. ರಾಮ ಭಟ್ಟರು ಅಜಾತಶತ್ರುವಾಗಿದ್ದರು. ಸಂಸ್ಥೆಗಳನ್ನು ಬೆಳೆಸುವಲ್ಲಿ ಹಗ್ಗದಂತೆ ಕೆಲಸ ಮಾಡಿದ್ದಾರೆ. ಈ ವಾತಾವರಣದಲ್ಲಿ ಕಲಿಯುವ ವಿದ್ಯಾರ್ಥಿಗಳಲ್ಲಿ ಕೋದಂಡನ ಶಕ್ತಿಗಳು ಉದ್ಭವಿಸಿ ದೇಶವನ್ನು ಹಳಿಗೆ ತರಲಿ” ಎಂದು ಶುಭ ಹಾರೈಸಿದರು…
ಇನ್ನೋರ್ವ ಅತಿಥಿಗಳಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ತನ್ನ ಅನುಭವಗಳನ್ನು ಹಂಚಿಕೊಳ್ಳುತ್ತಾ “ರಾಮನ ಹೆಸರಿಗೆ ಗೌರವ ತರುವಲ್ಲಿ ಉರಿಮಜಲು ಕೆ. ರಾಮ ಭಟ್ಟರ ಜೀವನವು ಸಾರ್ಥಕವಾಯಿತು. ಸಭಾಭವನದ ಲೋಕಾರ್ಪಣೆಯಿಂದ ರಾಮಭಟ್ಟರು ಮಾಡಿದ ಕೆಲಸಗಳನ್ನು ಮತ್ತೆ ಮತ್ತೆ ನೆನಪು ಮಾಡುತ್ತಾ ನಿರಂತರವಾಗಿ ನಡೆಯುವಂತಾಗಬೇಕು. ಸಾಮಾಜಿಕ ನಿರ್ಣಯಕ್ಕೆ ಬದ್ಧರಾಗಿದ್ದ ಅನೇಕ ಹಿರಿಯರ ಪೈಕಿ ರಾಮ ಭಟ್ಟರು ಒಬ್ಬರಾಗಿದ್ದರು. ಸ್ವಂತಕ್ಕೆ ಅಪೇಕ್ಷಿಸದೆ ಸಮಾಜಕ್ಕಾಗಿ ಬದುಕಿದ ರಾಮ ಭಟ್ಟರು ಬಹಳ ಎತ್ತರದಲ್ಲಿದ್ದಾರೆ” ಎಂದರು.
ಅತಿಥಿಗಳಾದ ರಂಗಮೂರ್ತಿ ಎಸ್.ಆರ್. ಮಾತನಾಡುತ್ತಾ “ಪುತ್ತೂರು ವಿದ್ಯಾವರ್ಧಕ ಸಂಘದ ಬೆಳವಣಿಗೆಗೆ ಮೂಲ ಪ್ರೇರಣೆ ರಾಮಭಟ್ಟರು. ವಿದ್ಯಾಸಂಸ್ಥೆಗಳನ್ನು ಅವರು ಭದ್ರಬುನಾದಿಯೊಂದಿಗೆ ಹಾಕಿಕೊಟ್ಟಿದ್ದಲ್ಲದೆ ಹಲವಾರು ಕಡೆಯಲ್ಲಿ ವಿಸ್ತರಿಸಿದ್ದಲ್ಲದೆ ಗುಣಮಟ್ಟದಲ್ಲಿ ಎತ್ತರಕ್ಕೇರಿಸಿ ಬೆಳೆಸುವಲ್ಲಿ ಕಾರಣಿಭೂತರಾದವರು. ಅವರ ಮಾರ್ಗದರ್ಶನದ ದಾರಿಯಲ್ಲಿ ನಡೆಯುವುದೇ ಅವರನ್ನು ನೆನಪು ಮಾಡುವ ಸ್ಥಿತಿ” ಎಂದು ನೆನಪುಗಳನ್ನು ಹಂಚಿಕೊಂಡರು.
ಆಡಳಿತ ಮಂಡಳಿಯ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಬಂಗಾರಡ್ಕ ಮಾತನಾಡುತ್ತಾ “ರಾಷ್ಟ್ರ ನಿರ್ಮಾಣದ ಕನಸಿನ ಮಾನಸಿಕತೆಯನ್ನು ಹೊತ್ತ ಕಾಲೇಜು ವಿವೇಕಾನಂದ ಪಾಲಿಟೆಕ್ನಿಕ್. ನಮ್ಮ ಕಾರ್ಯ ಪದ್ಧತಿಗೆ ಸರಿಯಾಗಿ ನಡೆದಲ್ಲಿ ಸಮಾಜದಲ್ಲಿ ಉತ್ತಮ ಸಂಸ್ಕೃತಿಯ ಜವಾಬ್ದಾರಿಯುತ ಪ್ರಜೆಯನ್ನಾಗಿ ರೂಪಿಸುವಲ್ಲಿ ನಮ್ಮ ಸಂಸ್ಥೆಯಿಂದ ಎಲ್ಲಾ ಪ್ರಯತ್ನವನ್ನು ಮಾಡುತ್ತೇವೆ ಎಂಬ ಭರವಸೆಯನ್ನು ನಾವು ಕೊಡುತ್ತೇವೆ” ಎಂದು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುತ್ತಾ ನುಡಿದರು.
ಕಾರ್ಯಕ್ರಮದ ಅಧ್ಯಕ್ಷರು ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಆದ ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡುತ್ತಾ ” ರಾಮ್ ಭಟ್ಟರು ಹಿಂದುತ್ವಕ್ಕೋಸ್ಕರ ಬದುಕಿದ ವ್ಯಕ್ತಿ. ಈ ಸಭಾಂಗಣಕ್ಕೆ ಅವರ ಹೆಸರನ್ನು ಇಟ್ಟಿರುವುದು ಪಾಲಿಟೆಕ್ನಿಕ್ ನ ಕಿರೀಟಕ್ಕೆ ಒಂದು ಗರಿ ಸೇರಿಸಿದಂತಾಗಿದೆ. ರಾಜಕೀಯ ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ರಾಮ ಭಟ್ಟರ ಕೊಡುಗೆ ಅಪಾರ. ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಬದಲಾವಣೆ ತರುವಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಪ್ರಾಮಾಣಿಕವಾಗಿ ಮುಂದುವರಿಸುವ ಸಲುವಾಗಿ ಸಿಕ್ಕಿದ ಭಟ್ರು ರಾಮಭಟ್ಟರು. ಈ ಸಭಾಂಗಣಕ್ಕೆ ಅವರ ಹೆಸರನ್ನಿಟ್ಟಿರೋದು ನಮಗೆಲ್ಲರಿಗೂ ಗೌರವವನ್ನು ತಂದುಕೊಟ್ಟಿದೆ. ರಾಷ್ಟ್ರೀಯ ಚಿಂತನೆಗಳನ್ನು ಇಟ್ಟುಕೊಂಡು ಕುಟುಂಬದ ಸಮಾಜದ ಉನ್ನತಿಗಾಗಿ ಶ್ರಮಿಸುವ ಪ್ರೇರಣೆಯ ಕೇಂದ್ರ ಈ ವಿದ್ಯಾಕೇಂದ್ರ. ಎಲ್ಲಾ ರೀತಿಯ ತಂತ್ರಗಾರಿಕೆಯನ್ನು ಕಲಿತು ರಾಷ್ಟ್ರ ಮೊದಲು ಎಂಬ ಚಿಂತನೆಯನ್ನು ಇಟ್ಟುಕೊಂಡು ನಾವೆಲ್ಲ ಒಟ್ಟು ಸೇರಿ ಒಂದು ವೈಜ್ಞಾನಿಕ ಬದಲಾವಣೆ ತರೋಣ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಖಜಾಂಜಿಯಾದ ನರಸಿಂಹ ಪೈ, ಸದಸ್ಯರುಗಳಾದ ರವಿ ಮುಂಗ್ಲಿ ಮನೆ, ಈಶ್ವರ ಚಂದ್ರ ಉಷಾಮಳಿಯ, ಸನತ್ ಕುಮಾರ್, ಅಚ್ಯುತ ಪ್ರಭು ಹಾಗೂ ಹಿರಿಯರಾದ ಕೆ ವಿ ನಾರಾಯಣ್ ವತ್ಸಲರಾಜ್ನಿ, ಶ್ರೀನಿವಾಸ್ ಪೈ ಬಲರಾಮ್ ಆಚಾರ್ಯ, ಮುಗುರೋಡಿ ಬಾಲಕೃಷ್ಣ ರೈ, ವೇದವ್ಯಾಸ, ಕಮಲಾ ಭಟ್, ಮಹೇಶ್ ಪ್ರಸನ್ನ, ರವೀಂದ್ರ ರೈ. ಸಂಧ್ಯಾ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ವಾಗತವನ್ನು ನೆರವೇರಿಸಿದ ಪಾಲಿಟೆಕ್ನಿಕ್ ನ ಪ್ರಾಂಶುಪಾಲರಾದ ಮುರಳೀಧರ ಯಸ್ ಮಾತನಾಡುತ್ತ “ಉರಿಮಜಲು ಕೆ ರಾಮ ಭಟ್ಟರು ನಮ್ಮೆಲ್ಲರ ಪ್ರೇರಕ ಶಕ್ತಿ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ಸ್ಥಾಪಿತವಾದ ಈ ಸಂಸ್ಥೆಯಿಂದ ವಿದ್ಯಾರ್ಥಿಗಳಿಗೆ ಸುಸಂಸ್ಕೃತ ವಿದ್ಯಾಭ್ಯಾಸ ನೀಡಿ ದೇಶಭಕ್ತ ಪ್ರಜೆಯನ್ನಾಗಿಸುವುದೇ ನಮ್ಮ ಧ್ಯೇಯ”ಎಂದರು.
ಧನ್ಯವಾದ ಸಮರ್ಪಣೆಯನ್ನು ಸಿವಿಲ್ ಇಂಗಿನಿಯರಿಂಗ್ ವಿಭಾಗ ಮುಖ್ಯಸ್ಥರಾದ ಶ್ರೀ ರವಿರಾಮ ಎಸ್ ಇವರು ನಡೆಸಿಕೊಟ್ಟರು.
ಇಲೆಕ್ಟ್ರಾನಿಕ್ಸ್ &ಕಮ್ಯುನಿಕೇಶನ್ ವಿಭಾಗದ ಹಿರಿಯ ಉಪನ್ಯಾಸಕಿ ಶ್ರೀಮತಿ ಜಯಲಕ್ಷ್ಮಿ ಎಸ್. ಪ್ರಾರ್ಥಿಸಿದರು. ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಆಟೋಮೊಬೈಲ್ ವಿಭಾಗದ ಉಪನ್ಯಾಸಕರಾದ ಶ್ರೀ ಗುರುರಾಜ್ ಹಾಗೂ ವಿಜ್ಞಾನ ವಿಭಾಗದ ಉಪನ್ಯಾಸಕಿಯಾದ ಸಹನಾ ಬಿ ಎಸ್ ನೆರವೇರಿಸಿದರು.