ಉಪ್ಪಿನಂಗಡಿ :ಚಿತ್ರ ಕಲೆ ಮನಸ್ಸನ್ನು ಅರಳಿಸುವ ಕಲೆಯಾಗಿದ್ದು, ಮಕ್ಕಳ ಕಲಾಭಿರುಚಿಯನ್ನು ಗುರುತಿಸಿ ಅರಳಿಸುವ ಕಾರ್ಯವನ್ನು ಶ್ರೀ ಮಾಧವ ಶಿಶು ಮಂದಿರ ಸಮಿತಿಯು ನಡೆಸುತ್ತಿರುವುದು ಶ್ಲಾಘನೀಯವೆಂದು ಹಿರಿಯ ಸಾಮಾಜಿಕ ಕಾರ್ಯಕರ್ತ ಶ್ರೀ ಸಹಸ್ರಲಿಂಗೇಶ್ವರದೇವಾಲಯದ ಆಡಳಿತ ಮಂಡಳಿ ಸದಸ್ಯಕಂಗ್ವೆ ವಿಶ್ವನಾಥ ಶೆಟ್ಟಿ ತಿಳಿಸಿದರು.
ಅವರು ಆದಿತ್ಯವಾರದಂದು (18/8/13)ಉಪ್ಪಿನಂಗಡಿಯಲ್ಲಿ ಶ್ರೀ ಮಾಧವ ಶಿಶು ಮಂದಿರ ಸಮಿತಿಯ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಅಂಗವಾಗಿ ಆಯೋಜಿಸಲಾದ ಶ್ರೀ ಕೃಷ್ಣನ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚಿತ್ರಕಲಾ ಶಿಕ್ಷಕ ಜಗದೀಶ್ ಪಾಟೀಲ್ ಮಾತನಾಡಿ, ಕಲೆ ಅರಳಲು ಸಮಾಜದ ಪ್ರೋತ್ಸಾಹ ಅತೀ ಅಗತ್ಯ.ಎಳೆಯ ಮಕ್ಕಳಲ್ಲಿ ಕಲಾಭಿರುಚಿಯನ್ನು ಮೂಡಿಸಿ, ಅದನ್ನು ಅರಳಿಸುವಂತೆ ಪ್ರತಿ ವರ್ಷ ಕೈಗೊಳ್ಳುತ್ತಿರುವ ಈ ಸ್ಪರ್ಧೆಕಲಾರಾಧನೆಗೆ ಸಮಾನವಾದುದ್ದು ಎಂದರು.
ವಿವಿಧ ವಿಭಾಗದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕಿನ 128 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಮಾರಂಭದಲ್ಲಿ ಶ್ರೀ ಮಾಧವ ಶಿಶು ಮಂದಿರ ಸಮಿತಿಯಅಧ್ಯಕ್ಷ ಮನೋಜ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಪಾಧ್ಯಕ್ಷ ಯತೀಶ್ ಶೆಟ್ಟಿ ವಂದಿಸಿದರು. ಜೊತೆ ಕಾರ್ಯದರ್ಶಿ ರೋಹಿತಾಕ್ಷ ಯು ಕೆ ಕಾರ್ಯಕ್ರಮ ನಿರೂಪಿಸಿದರು.