ಉಪ್ಪಿನಂಗಡಿ : ಯುಗಾದಿ ಹೊಸ ವರ್ಷಾಚರಣೆ ಮಾತ್ರವಾಗಿರದೇ ನಮ್ಮ ನಮ್ಮ ಸಾಮಾಜಿಕ ಬದ್ದತೆಯನ್ನು ನೆನೆಯುವ, ಸಂಕಲ್ಪಿಸುವ ಹಬ್ಬವಾಗಿರಬೇಕು. ಸದ್ವಿಚಾರಧಾರೆ ನಮ್ಮೆರಲ್ಲ ಮೈ ಮನದಲ್ಲಿ ನೆಲೆಗೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಂದಾಳು ಹರಿರಾಮಚಂದ್ರ ತಿಳಿಸಿದರು.
ಅವರು ಉಪ್ಪಿನಂಗಡಿ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ಯುಗಾದಿ ಉತ್ಸವದಲ್ಲಿ ಬೌದ್ಧಿಕ್ ನೀಡುತ್ತಾ ಮಾತನಾಡುತ್ತಿದ್ದರು. ನಮ್ಮ ದೇಶದ ಸಮಸ್ಯೆ, ನಮ್ಮ ಸಮಾಜದ ಸಮಸ್ಯೆ, ನಮ್ಮ ನೆರೆ ಮನೆಯ ಸಮಸ್ಯೆ, ನಮ್ಮ ಮನೆಯ ಸಮಸ್ಯೆ, ನಮ್ಮ ಸಮಸ್ಯೆಗಳನ್ನು ನಿವಾರಿಸುವ ಮುನ್ನ ಸಮಸ್ಯೆಯ ಕಾರಣವನ್ನು ತಿಳಿಯಬೇಕಾಗಿದೆ. ಬಹುತೇಕ ಸಮಸ್ಯೆ ನಮ್ಮ ನಮ್ಮ ಕಾರಣದಿಂದಲೇ ಮೂಡುವುದರಿಂದ ನಮ್ಮ ನಮ್ಮನ್ನು ತಿದ್ದಿಕೊಳ್ಳುವುದು ಮೊದಲ ಅಗತ್ಯವಾಗಿರುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಭಾರತ್ ಬೀಡಿ ವರ್ಕ್ಸ್ ಮಂಗಳೂರು ಶಾಖಾ ಮೇನೇಜರ್ ವಾಸುದೇವ್ರವರು ಮಾತನಾಡಿ, ಕಣ್ಮರೆಯಾಗುತ್ತಿರುವ ನಮ್ಮ ಸಂಸ್ಕಾರ ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಡೆಯುವ ಪ್ರಯತ್ನಗಳಿಗೆ ಭಗವಂತನ ಕೃಪೆ ಸದಾ ಇರಲಿ ಎಂದಾರೈಸಿದರು. ಶಿಶುಮಂದಿರದ ಮಾತಾಜಿ ಭಗಿನಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ನವಿನಾ ಸ್ವಾಗತಿಸಿ, ಪವಿತ್ರಾ ವಂದಿಸಿದರು.