ಉಪ್ಪಿನಂಗಡಿ: ಜಗದ್ವಂದ್ಯ ಭಾರತೀಯ ಸಂಸ್ಕೃತಿಯನ್ನು ಎಳೆಯ ಮಕ್ಕಳಲ್ಲಿ ಮೂಡಿಸಿ, ಅವರನ್ನು ಸತ್ಪ್ರಜೆಗಳನ್ನಾಗಿ ರೂಪಿಸುವಲ್ಲಿ ಸಮಾಜದ ಸರ್ವ ಸ್ತರದ ಸಹಕಾರವೂ ಲಭಿಸಬೇಕಾಗಿದೆ. ಜಾತಿ-ಮತ-ಬಡವ-ಬಲ್ಲಿದನೆಂಬ ಭೇದತೋರದೇ ಎಲ್ಲಾ ಮಕ್ಕಳ ಹುಟ್ಟುಹಬ್ಬವನ್ನು ಒಂದೇ ವೇದಿಕೆಯಲ್ಲಿ ಸಾಮೂಹಿಕವಾಗಿ ಆಚರಿಸುವುದು ಮೌಲ್ಯಯುತವಾದ ನಡೆಯಾಗಿದೆ. ದೇಶದ ಮಹಾನ್ ನಾಯಕ ಡಾ| ಬಿ ಆರ್ ಅಂಬೇಡ್ಕರ್ರವರ ಜನ್ಮದಿನಾಚರಣೆಯನ್ನೂ ಎಲ್ಲರೂ ಸಾಮೂಹಿಕವಾಗಿ ಆಚರಿಸುವುದು ಅವರ ಜೀವನಾದರ್ಶಗಳಿಗೆ ನೀಡುವ ಅನುಪಮ ಗೌರವವಾಗಿದೆ ಎಂದು ಹಿರಿಯ ಚಿಂತಕಿ, ಉಪ್ಪಿನಂಗಡಿ ವಿಜಯಾ ಬ್ಯಾಂಕ್ ಶಾಖಾಧಿಕಾರಿ ಶ್ರೀಮತಿ ಪದ್ಮ ತಿಳಿಸಿದರು.
ಅವರು ಆದಿತ್ಯವಾರ (14/04/13) ರಾತ್ರಿ ಉಪ್ಪಿನಂಗಡಿಯ ಶ್ರೀ ಮಾಧವ ಶಿಶು ಮಂದಿರದ ಆಶ್ರಯದಲ್ಲಿ ಗಾಣಿಗ ಸಭಾಭವನದಲ್ಲಿ ನಡೆಸಲಾದ ಶಿಶು ಮಂದಿರದ ಮಕ್ಕಳ ಸಾಮೂಹಿಕ ಹುಟ್ಟು ಹಬ್ಬ ಹಾಗೂ ಸಾಮರಸ್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಸಂಕುಚಿತ ಭೇದಭಾವವ ತೊರೆದು ರಾಷ್ಟ್ರದ ಉನ್ನತಿಯೇ ತನ್ನ ಉನ್ನತಿ ಎಂದು ತಿಳಿದು ಬದುಕಿಗೆ ಆದರ್ಶಮಯವಾದ ಗುರಿಯನ್ನು ಮೂಡಿಸುವ ಶಿಕ್ಷಣದ ಅಗತ್ಯತೆಯನ್ನು ಮನಗಂಡು ಕಾರ್ಯಚರಿಸುವ ಸಂಘ-ಸಂಸ್ಥೆಗಳ ಕಾರ್ಯವೈಖರಿ ಶ್ಲಾಘನೀಯವಾಗಿದೆ ಎಂದವರು ಕೊಂಡಾಡಿದರು.
ಮುಖ್ಯ ಭಾಷಣ ಮಾಡಿದ ಸೇವಾ ಭಾರತಿಯ ಪ್ರಮುಖ್ ಪುಷ್ಪರಾಜ್ ಶೆಟಿ ಅಡೆಕ್ಕಲ್ರವರು ಈ ಮಣ್ಣಿನ ಸಂಸ್ಕೃತಿಯ ಬಗ್ಗೆ ಅಪಾರ ಗೌರವವಿರಿಸಿಕೊಂಡಿದ್ದ ಅಂತೆಯೇ ಸಂಸ್ಕೃತಿಯೊಳಗೆ ನುಸುಳಿಕೊಂಡಿದ್ದ ವಿಕೃತಿಯ ಬಗ್ಗೆ ಸಡ್ಡೊಡೆದು ನಿಂತ ಅಂಬೇಡ್ಕರ್ರವರ ಜೀವನಾದರ್ಶಗಳ ಪಾಲನೆಯೊಂದಿಗೆ ಈ ಸಮಾಜದ ರಕ್ಷಣೆಯ ಹೊಣೆ ನಮ್ಮೆಲ್ಲರದ್ದಾಗಿದೆ. ದೇಶದ ಮಹಾನ್ ಚಿಂತಕ-ನಾಯಕರಾಗಿದ್ದ ಅಂಬೇಡ್ಕರ್ರವರಿಂದಾಗಿ ಈ ಮಣ್ಣಿನ ಮೂಲ ಸತ್ವದ ಗುಣಗಳಿಂದ ಕೂಡಿದ ಸಂವಿಧಾನ ರಚನೆಯಾಗಿದೆ ಎಂದು ವಿವರಿಸಿದರು. ಅಶ್ಪೃಶ್ಯ ಭಾವನೆಯ ಅನಿಷ್ಠ ಪದ್ದತಿಯಆ ಚರಣೆಯಿಂದ ಹಿಂದೂ ಸಮಾಜದ ಹಲವು ಮಂದಿ ತಪ್ಪು ಹೆಜ್ಜೆಯನ್ನಿರಿಸಿ ಅಮಾನವೀಯವಾಗಿ ವರ್ತಿಸಿದಾಗ ಹೋರಾಟದ ಮೂಲಕ ದಮನಿಸಲ್ಪಟ್ಟ ಸಮಾಜವನ್ನು ರಕ್ಷಿಸಲು ಮುಂದಾದ ಅಂಬೇಡ್ಕರ್ರವರು, ಲೋಕಾ ಸಮಸ್ತಾ ಸುಖಿನೋ ಭವಂತು ಎಂದ ಹಿಂದೂಧರ್ಮದ ಮೂಲ ಆಶಯವನ್ನು ಮನಗಂಡು ಸ್ವತಂತ್ರ ಭಾರತ ಹಿಂದೂಧರ್ಮದ ಮೂಲ ಆಶಯದಂತೆ ಕಾರ್ಯನಿರ್ವಹಿಸಬೇಕೆಂದು ಆಶಿಸಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಶಿಕ್ಷಣ ಸಂಯೋಜಕ ಮುದರ ಕಲ್ಕಾಡಿಯವರು ಮಾತನಾಡಿ, ಒರ್ವ ಭ್ರಾಹ್ಮಣ ಶಿಕ್ಷಕನ ಪ್ರೋತ್ಸಾಹದಿಂದ ವಿದ್ಯಾಭ್ಯಾಸ ಕಲಿತ ಭೀಮರಾವ್ ಅವರಿಂದಲೇ ಬ್ರಾಹ್ಮಣ ಸಮಾಜದ ಬಳಕೆಯಲ್ಲಿದ್ದ ಅಂಬೇಡ್ಕರ್ ಎಂಬ ಉಪ ನಾಮವನ್ನೂ ಪಡೆದುಕೊಂಡು ಖ್ಯಾತರಾದರು. ಧರ್ಮ ಶಿಕ್ಷಣದಿಂದ ವಿಮುಖರಾದ ಮಂದಿ ಸ್ಪರ್ಶ ಅಸ್ಪೃಶ್ಯತೆಯ ಬಾವದಲ್ಲಿ ಸಮಾಜವನ್ನು ಶೋಷಿಸಲು ಮುಂದಾದಾಗ ಮೌನ ಮುರಿದು ಮಾತನಾಡಿದರು. ಅಮಾನುಷತ್ವದ ವಿರುದ್ದ ಸಮರ ಸಾರಿದರು.ಅವರ ಜೀವನಾದರ್ಶವನ್ನು ಯುವ ಪೀಳಿಗೆಗೆ ತಿಳಿಯುವಂತಾಗಲು ಹಿಂದೂ ಸೇವಾ ಪ್ರತಿಷ್ಠಾನ ಸಂಕಲ್ಪಿತ ಸಾಮರಸ್ಯ ದಿನಾಚರಣೆಯನ್ನು ಸಮಾಜದ ಎಲ್ಲಾ ವರ್ಗದ ಜನತೆ ಒಗ್ಗೂಡಿ ಆಚರಿಸುತ್ತಿರುವುದು ಆರೋಗ್ಯ ಪೂರ್ಣ ಬೆಳವಣಿಗೆ.ತನ್ಮೂಲಕ ಅಂಬೇಡ್ಕರ್ರವರು ಕೇವಲ ಒಂದು ಜಾತಿಯ ನಾಯಕರಲ್ಲ ಬದಲಾಗಿ ಅವರು ಇಡೀ ಮನುಕುಲದ ನಾಯಕರೆಂದು ಮಾನ್ಯ ಮಾಡಿ ಗೌರವಿಸಿದಂತಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಶ್ರೀ ಮಾಧವ ಶಿಶು ಮಂದಿರ ಸಮಿತಿಯ ಅಧ್ಯಕ್ಷ ಮನೋಜ್ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಕಾರ್ಯದರ್ಶಿ ಯು.ಎಲ್ ಉದಯ್ಕುಮಾರ್ ವರದಿ ವಾಚಿಸಿ, ಕೆ ಸುಧಾಕರ ಶೆಟ್ಟಿ ವಂದಿಸಿದರು.
ಶ್ರೀಮತಿ ಪುಷ್ಪಲತಾತಿಲಕ್ ಹಾಗೂ ಹರಿರಾಮಚಂದ್ರರವರ ನಿರೂಪಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅತಿಥಿಗಳಿಂದ ಹಾಗೂ ಪುಟಾಣಿ ಮಕ್ಕಳಿಂದ ಭಾರತ ಮಾತೆಗೆ ಪೂಜೆ ಹಾಗೂ ವೀರ ಸನ್ಯಾಸಿ ವಿವೇಕಾನಂದ ಹಾಗೂ ಬಿ ಆರ್ ಅಂಬೇಡ್ಕರ್ರವರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಗೈಯಲಯಿತು.
ಮಾತಾಜಿ ಪುಷ್ಪಲತಾ ಎಸ್ರವರ ಮಾರ್ಗದರ್ಶನದಲ್ಲಿ ಶಿಶು ಮಂದಿರದ ಪುಟಾಣಿಗಳಿಂದ ಹಾಗೂ ಬಾಲಗೋಕುಲದ ಮಕ್ಕಳಿಂದ ಅತ್ಯಾಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಯಿತು.