ಉಪ್ಪಿನಂಗಡಿ : ಸಮಾಜದ ಶ್ರದ್ಧಾ ಬಿಂದುಗಳಲ್ಲಿ ಒಂದಾಗಿರುವ ಮಾತೃಶಕ್ತಿಯ ಜಾಗೃತಿಯಿಂದ ರಾಷ್ಟ್ರದ ನವೋತ್ಥಾನ ಸಾಧ್ಯ. ನಮ್ಮ ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆಗೈದ ವೀರ ವನಿತೆಯರ ಬಗ್ಗೆ, ರಾಷ್ಟ್ರ ಪುರುಷರಿಗೆ ಜನ್ಮವಿತ್ತ ಮಹಾ ಮಾತೆಯರ ಬಗ್ಗೆ ಮರೆವು ಸಲ್ಲದು. ರಾಷ್ಟ್ರ್ರದೆದುರಿನ ಸವಾಲುಗಳನೆದುರಿಸಲು ಸಾಂಘಿಕ ಹೋರಾಟ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಸಂಪರ್ಕ ಪ್ರಮು ಖ್ ರವೀಂದ್ರರವರು ಕರೆ ನೀಡಿದರು. ಅವರು, ಉಪ್ಪಿನಂಗಡಿ ಶ್ರೀ ಮಾಧವ ಶಿಶು ಮಂದಿರದ ಮತ್ತು ಮಾತೃ ಮಂಡಳಿಯ ಆಶ್ರಯದಲ್ಲಿ ಉಪ್ಪಿನಂಗಡಿಯ ನೇತ್ರಾವತಿ ಕುಮಾರಾಧಾರ ನದಿ ಸಂಗಮ ತಟದಲ್ಲಿ ಆದಿತ್ಯವಾರದಂದು (ಮಾ 3) ನಡೆದ ಗಂಗಾ ಪೂಜನಾ ಮತ್ತು ಮಾತೃ ಸಂಗಮದ ಸಭಾ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಿದ್ದರು.
ನಂಬಿಕೆಯ ಆಧಾರದಲ್ಲಿ ಬಾಳುವ ಸಮಾಜ ಹಿಂದೂ ಸಮಾಜ. ಇಲ್ಲಿ ಎಲ್ಲಾ ಕಣ ಕಣಗಳಲ್ಲೂ ನಾವು ದೇವರನ್ನು ಕಾಣುತ್ತೇವೆ. ಪವಿತ್ರ ಪಾವನಳಾದ ಗಂಗೆಯನ್ನು ನಾವು ನಿತ್ಯ ಸ್ಮರಿಸುತ್ತೇವೆ. ದೇಶದ ಎಲ್ಲಾ ನದಿಗಳನ್ನು ಗಂಗೆ ಸಮಾನಳು ಎಂದು ಪೂಜಿಸುತ್ತೇವೆ. ಸಕಲ ಜೀವಕೋಟಿಗೂ ಜೀವ ಜಲವನ್ನುಒದಗಿಸುವ ಗಂಗೆಯನ್ನು ಪೂಜಿಸುವುದು , ದೇವರೆಂದು ನಂಬಿರುವುದು ಈ ಮಣ್ಣಿನ ಸಂಸ್ಕೃತಿ. ಈ ಸಂಸ್ಕೃತಿಯ ಮೌಲ್ಯವನ್ನು ಪುನರಪಿ ಮನವರಿಕೆ ಮಾಡಿಕೊಡುವ ಹಿನ್ನೆಲೆಯಲ್ಲಿ ಗಂಗಾ ಪೂಜೆಯನ್ನು ನೇತ್ರಾವತಿ ಮತ್ತು ಕುಮಾರಾಧಾರ ನದಿ ಸಂಗಮ ಸ್ಥಳದಲ್ಲಿ ನಡೆಸಲಾಗುತ್ತಿದೆ. ನಮ್ಮದೇಶದಲ್ಲಿ ಬಟ್ಟೆಧರಿಸುವುದು ಮಾನರಕ್ಷಣೆಗಾಗಿ, ಅದು ಗೌರವದ ಸಂಕೇತವೂ ಹೌದು. ತಿಲಕವಿಟ್ಟು, ಬಳೆತೊಟ್ಟು ಸುತ್ತಾಡುವುದೆಂದರೆ ಅದೆಲ್ಲವೂ ಗೌರವದ ಪ್ರತೀಕವಾಗಿದೆ. ಆದರೆ ನಮ್ಮ ಇಂದಿನ ಜನಾಂಗ ಈ ಬಗ್ಗೆ ಅನಾದರವಿರಿಸಿ, ಫ್ಯಾಷನ್ ಹೆಸರಿನಲ್ಲಿ ತಿಲಕ, ಬಳೆಗಳನ್ನು ತ್ಯಜಿಸಿರುವುದು ದುರಂತಮಯ ವಿದ್ಯಾಮಾನ. ಉಳಿಸಿಕೊಡಬೇಕಾದವರು ತಿಳಿಸಿಕೊಡದಿದ್ದರೆ, ದಿನ ನಿತ್ಯ ನೋಡುವ ಟಿ ವಿಯಲ್ಲ ಿಕಾಣಿಸುವ ಮಹಿಳೆಯರು ಇದೇ ರೀತಿಯ ತಿಲಕ ಬಳೆಗಳ ರಹಿತವಾದವರೇ ಆದರೆ ಹೆಣ್ಣು ಮಕ್ಕಳು ಇದರತ್ತ ಸಕಾರಾತ್ಮಕವಾಗಿ ಚಿಂತಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು. ನಮ್ಮ ಸಂಸ್ಕೃತಿಯ ಬಗ್ಗೆ ನಿರ್ಲಕ್ಷದಿಂದಾಗಿ ಅವಿಭಕ್ತ ಕುಟುಂಬ ವಿಭಕ್ತವಾಗಿದೆ. ದೀರ್ಘ ದಾಂಪತ್ಯ ವಿಚ್ಚೇದನದತ್ತ ಸಾಗಿದೆ. ಕೌಟುಂಬಿಕ ಪ್ರೀತಿ- ವಿಶ್ವಾಸ- ಗೌರವ- ರಕ್ಷಣೆ ಮರೆಯಾಗಿದೆ. ಒಟ್ಟು ಸಮಾಜದ ದಿಕ್ಕು ತಪ್ಪಿ ಬವಣೆ ಪಡುವಂತಾಗಿದೆ. ಈ ಸೂಕ್ಷ್ಮತೆಯನ್ನು ಮನಗಂಡು ದೇಶದ ಹಲವಾರು ಸಂಘ ಸಂಸ್ಥೆಗಳು ಸಮಾಜದ ಪುನರುತ್ಥಾನಕ್ಕಾಗಿ ಶ್ರಮಿಸುತ್ತಿದೆ. ಅಂತಹ ಶ್ರಮವನ್ನು ಸಾರ್ಥಕಗೊಳಿಸಲು ಪ್ರತಿಯೊಂದು ಮನೆಯೂ ಪ್ರತಿಯೊಬ್ಬ ಮಹಿಳೆಯೂ ಕಂಕಣ ಬದ್ದರಾಗಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಮುಖ್ಯೋಪಧ್ಯಾಯಿನಿ ಶ್ರೀಮತಿ ಶಶಿಕಲಾ ರಾವ್ರವರು ಮಾತನಾಡಿ, ಮಹಿಳೆಯನ್ನು ಮಾತೆ ಎಂದು ಗೌರವಿಸಿ ಪೂಜಿಸುವ ನಮ್ಮ ಈ ಸಮಾಜಕ್ಕೆ ಮಹಿಳೆಯರೂ ಜಾಗೃತಶೀಲರಾಗಿ ಕಾರ್ಯ ನಿರ್ವಹಿಸುವ ಕಾಲ ಘಟ್ಟದಲ್ಲಿದ್ದೇವೆ. ಧಾರ್ಮಿಕ ವಾಗಿ ಮಹತ್ವ ಪಡೆದಿರುವ, ಗಂಗಾ ಪೂಜೆಯನ್ನುಉಪ್ಪಿನಂಗಡಿಯ ಸಂಗಮ ಕ್ಷೇತ್ರದಲ್ಲಿ ಸಾಮರಸ್ಯ ಭಾವದಿ, ಸಾಮಾಜಿಕ ಕಾಳಜಿಯ ಹಿನ್ನೆಲೆಯೊಂದಿಗೆ ನಡೆಸುತ್ತಿರುವುದು ಆದರ್ಶಪ್ರಾಯವೆನಿಸಿದೆ ಎಂದರು.
ನೂರಾರು ಮಾತೆಯರು ಭಾಗವಹಿಸಿದ್ದ ಈ ಗಂಗಾ ಪೂಜನಾ ಕಾರ್ಯಕ್ರಮದ ಪ್ರಧಾನ ಪೂಜೆಯನ್ನು ಸಮಸ್ತ ಮಾತೆಯರ ಪರವಾಗಿ ಕುಂಜ್ಞ ನಲಿಕೆ ದಂಪತಿಗಳು ನೆರವೇರಿಸಿದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿಶ್ವಹಿಂದೂ ಪರಿಷತ್ ಪ್ರಾಂತ ಸರಸಂಘ ಪ್ರಮುಖ್ ಬಸವರಾಜ ಮಾತನಾಡಿ, ಪ್ರಯಾಗದಲ್ಲಿ ಈ ಬಾರಿ ನಡೆದಕುಂಭ ಮೇಳದಲ್ಲಿ ಸಂತ ಸಮಾವೇಶದಲ್ಲಿ ಕೈಗೊಂಡ ನಿರ್ಣಯದಂತೆ ದೇಶವ್ಯಾಪಿ ಹಿಂದೂಗಳೆಲ್ಲರೂ ರಾಮನಾಮ ಜಪಯಜ್ಞದಲ್ಲಿ ಪಾಲ್ಗೊಂಡು, ಅಯೋಧ್ಯಾ ಶ್ರೀ ರಾಮ ಮಂದಿರ ನಿರ್ಮಾಣದತ್ತ ಚಿಂತನಾಶೀಲರಾಗಬೇಕೆಂದರು. ಹಿಂದೂ ಸೇವಾಪ್ರತಿಷ್ಠಾನದ ಸಂಚಾಲಕ ಶ್ರೀಪಾದ, ಪುತ್ತೂರುಜಿಲ್ಲಾ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ರಾಧಾಕೃಷ್ಣ ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ಶ್ರೀ ಮಾಧವ ಶಿಶು ಮಂದಿರ ಸಮಿತಿಯು ಸ್ವಾಮೀ ವಿವೇಕಾನಮಂದರ ನೂರೈವತ್ತು ಜನ್ಮದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಅಂಚೆ ಕಾರ್ಡ್ ನಲ್ಲಿ ಸ್ವಾಮೀ ವಿವೇಕಾನಂದರ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದಲ್ಲಿ ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಸುಭದ್ರಾ ಭಟ್ ಸ್ವಾಗತಿಸಿ, ಕಾರ್ಯದರ್ಶಿ ಪುಷ್ಪಲತಾ ಜನಾರ್ಧನ್ ವಂದಿಸಿದರು. ಪುಷ್ಪಲತಾ ತಿಲಕ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮುಂದಾಳುಗಳಾದ , ದಿನೇಶ್ಜೈನ್, ಶಿವಪ್ರಸಾದ್, ಕರುಣಾಕರ ಸುವರ್ಣ, ಕಂಗ್ವೆ ವಿಶ್ವಾನಾಥ ಶೆಟ್ಟಿ, ಸಂಜೀವ ಮಠಂದೂರು, ಡಾ . ಎಂ ಎನ್ ಭಟ್, ಯು ರಾಮ, ಮೊದಲಾದವರು ಭಾಗವಹಿಸಿದ್ದರು.