ಉಪ್ಪಿನಂಗಡಿ: ಶ್ರೀ ಮಾಧವ ಶಿಶು ಮಂದಿರ ವೇದಶಂಕರ ನಗರ ಉಪ್ಪಿನಂಗಡಿ ಇಲ್ಲಿನ ಪುಟಾಣಿ ಮಕ್ಕಳ ಕಿರು ಪ್ರವಾಸವು ದಿನಾಂಕ ೫/೯/೧೨ ರಂದು ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರ, ಈಶ್ವರ ಮಂಗಲ ಪಂಚಮುಖಿ ಹನುಮ ಗಿರಿಗೆ ನಡೆಯಿತು.
ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿನ ಸರಸ್ವತಿ ವಂದನಾ, ಕಲ್ಲಡ್ಕ ಶಿಶು ಮಂದಿರಗಳ ಪುಟಾಣಿಗಳಿಂದ ದೊರೆತ ಸ್ವಾಗತ ರೂಪಿತಗೊಂಡ ಪ್ರಹಸನ, ಮನಮೋಹಕಗೊಂಡಿತ್ತು. ಉಪಹಾರವನ್ನು ಸೇವಿಸಿ, ಈಶ್ವರ ಮಂಗಲದ ಹನುಮ ಬೆಟ್ಟಕ್ಕೆ ಹೋಗಿ ದೇವರ ದರುಶನ ಮಾಡಿ, ಪೂರ್ವ ನಿಗದಿಯಂತೆ ಈಶ್ವರ ಮಂಗಲದ ಪಂಚಲಿಂಗೇಶ್ವರ ದೇವಾಲಯಕ್ಕೆ ಹೋದೆವು.
ಪವಾಡವೆನಿಸಿತು ಅನ್ನದಾನದ ಮಹಿಮೆ:
ಪೂರ್ವ ನಿಗದಿಯಂತೆ ನಮ್ಮ ಪ್ರವಾಸ ತಂಡದ ಮಧ್ಯಾಹ್ನದ ಭೋಜನ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ನಡೆಯುವುದೆಂದು ನಿಶ್ಚಯವಾಗಿತ್ತು. ಈ ಬಗ್ಗೆ ಪ್ರಮುಖರ ನಡುವೆ ಮೂರು ಬಾರಿಯ ದೂರವಾಣಿ ಸಂಪರ್ಕವೂ ನಡೆದಿತ್ತು.
ಆದರೆ ದೇವಾಲಯದಲ್ಲಿ ಅಡುಗೆ ವಿಭಾಗಕ್ಕೆ ನಮ್ಮ ಆಗಮನದ ಬಗ್ಗೆ ತಿಳಿಸಲು ಆ ಮಹನೀಯರು ಮರೆತಿದ್ದರು. ಇದರಿಂದಾಗಿ ಹಸಿದು ಕಂಗೆಟ್ಟಿದ್ದ ಮಕ್ಕಳೊಂದಿಗೆ ಹೋಗಿದ್ದ ನಮ್ಮ ತಂಡ ಹಿಂತಿರುಗುವ ನಿರ್ಧಾರವನ್ನು ತಳೆಯುವುದರಲ್ಲಿತ್ತು.
ತನ್ನ ಮರೆಯುವಿಕೆಯ ಬಗ್ಗೆ ಮನನೊಂದು ಧಾವಿಸಿ ಬಂದ ಆ ಮಹನೀಯರು ತ್ವರಿತವಾಗಿ ಅನ್ನ ಬೇಯಿಸಲು ಸೂಚನೆ ನೀಡಿದರು. ಆ ವೇಳೆಗೆ ಪಾಕ ಶಾಲೆಯಲ್ಲಿ ಉಳಿದಿದ್ದ ಒಂದು ಬಕೆಟ್ ಅನ್ನವನ್ನು ಹಸಿದ ಮಕ್ಕಳಿಗೆ ನೀಡಿ ಎಂಬ ನಮ್ಮ ಸಲಹೆಗೆ ಸ್ಪಂದಿಸಿದ ದೇವಾಲಯದ ಸಿಬ್ಬಂದಿಗಳು ಮಕ್ಕಳಿಗೆ ಅನ್ನ ನೀಡಿದರು. ಬಳಿಕ ಮಕ್ಕಳ ಮಾತೆಯಂದಿರಿಗೆ ಅನ್ನ ನೀಡಿದರು. ಬಳಿಕ ಶಿಶು ಮಂದಿರದ ಆಡಳಿತ ಮಂಡಳಿಯ ಸದಸ್ಯರಿಗೂ ಅನ್ನ ನೀಡಿದರು. ಬೇಯುತ್ತಿರುವ ಅನ್ನ ಒಲೆಯಲ್ಲಿ ಬೇಯುತ್ತಿದ್ದಂತೆಯೇ ಉಳಿದಿದ್ದ ಬಕೆಟ್ ಅನ್ನ ಅಕ್ಷಯ ಪಾತ್ರೆಯಾಗಿ ರೂಪಿತಗೊಂಡು ಹಸಿದಿದ್ದ ಪ್ರವಾಸಿಗರಿಗೆ ಲಭಿಸಿ ಮತ್ತೂ ಅದರಲ್ಲಿ ಮಿಕ್ಕಿ ಉಳಿದಿದ್ದು ವಿಸ್ಮಯ ತಂದಿದೆ.
ಸಿದ್ದತೆ ಮಾಡಿಡಲು ಮರೆತರೂ , ಆತಿಥ್ಯ ನೀಡಬೇಕೆಂದು ಪ್ರಾಮಾಣಿಕ ಕಾಳಜಿ ಮೆರೆದ ಅಲ್ಲಿನ ಗಣ್ಯರ ಸದ್ಗುಣಕ್ಕೆ ದೇವನೊಲಿದು ಎಲ್ಲರೂ ಸಂತೃಪ್ತಿಯಿಂದ ಉಣ್ಣುವಂತೆ ಪರಿಸ್ಥಿತಿಯನ್ನು ಬದಲಾಯಿಸಿದ್ದು ಈ ಮಣ್ಣಲ್ಲಿ ಲೀನವಾಗಿರುವ ದೈವಿಕ ಶಕ್ತಿಯಂತೆ ಕಂಡು ಬಂತು.
ಪ್ರವಾಸದಲ್ಲಿ ಇಪ್ಪತ್ತು ಮಕ್ಕಳು, ಮತ್ತವರ ಪೋಷಕರು, ಶಿಶು ಮಂದಿರ ಸಮಿತಿಯ ಅಧ್ಯಕ್ಷ ಮನೋಜ್ ಶೆಟ್ಟಿ, ಕಾರ್ಯದರ್ಶಿ ಯು.ಎಲ್ ಉದಯ್ ಕುಮಾರ್, ಜೊತೆ ಕಾರ್ಯದರ್ಶಿ ಹರಿರಾಮಚಂದ್ರ, ಯು ಕೆ ರೋಹಿತಾಕ್ಷ, ಭಾಸ್ಕರ್ ಆಚಾರ್ಯ, ಜಿಲ್ಲಾ ಮಾತಾಜಿ ಭಗಿನಿ ಅಭಿಲಾಶಾ, ಶಿಶು ಮಂದಿರ ಮಾತಾಜಿ ಭಗಿನಿ ಮಾಲಾಶ್ರೀ, ಮೊದಲಾದವರು ಭಾಗಿಯಾಗಿದ್ದರು.