• 08251 236599
  • 08251 236444
  • vvsputtur@gmail.com

ಸೇವಾ ದಿನ ಆಚರಣೆ

ಉಪ್ಪಿನಂಗಡಿ : ಮೌಲ್ಯಗಳ ಕುಸಿತಕ್ಕೆ ಒಳಗಾಗಿರುವ ಇಂದಿನ ಆಧುನಿಕಜೀವನದಲ್ಲಿ ಸಂಸ್ಕಾರ ಶಿಕ್ಷಣ ನೀಡುವ ಕಾರ್ಯ ಅತ್ಯಗತ್ಯವಾದದ್ದು ಹಾಗೂ ದೇವತಾಕಾರ್ಯಕ್ಕೆ ಸರಿಸಮಾನವಾದದ್ದಾಗಿದೆ. ಹಿಂದೂ ಸಮಾಜದಲ್ಲಿ ಅನಪೇಕ್ಷಿತ ರೀತಿಯಲ್ಲಿ ಸೇರಿಕೊಂಡಿದ್ದ ಅನಿಷ್ಠಗಳನ್ನು ಸೇವೆಯೆಂಬ ಧ್ಯೇಯದಲ್ಲಿ ನಿವಾರಿಸಲು ಶ್ರಮಿಸಿದ  ಹಿಂದೂ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಸ್ವರ್ಗೀಯ ಅಜಿತ್‌ಕುಮಾರಜೀ ಸ್ಮರಣಾರ್ಥ ನಡೆಸುವ ಸೇವಾ ದಿನ ಸಮಾಜಕ್ಕೆ ಸೇವಾ ದೀಕ್ಷೆ ನೀದಲು ಸಹಕಾರಿಯಾಗಲಿ ಎಂದು ಹಿರಿಯ ಚಿಂತಕ, ವಿಶ್ರಾಂತ ಶಿಕ್ಷಕ ಎಂ ಕೆ ಸಾಲಿಯಾನ್‌ ಕರೆ ನೀಡಿದ್ದಾರೆ. ಅವರು ಉಪ್ಪಿನಂಗಡಿಯ ವೇದಶಂಕರ ನಗರದಲ್ಲಿನ ಶ್ರೀ ಮಾಧವ ಶಿಶು ಮಂದಿರದಲ್ಲಿ ನಡೆದ ಸೇವಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.


ಸಮಾಜದ ಭವಿಷತ್‌ಕಾಲದ ಸಂಪತ್ತಾಗಿರುವ ಎಳೆಯ ಮಕ್ಕಳನ್ನು ಸಂಸ್ಕಾರ ಶಿಕ್ಷಣಕ್ಕೆ ಒಳಪಡಿಸಿ ಅವರನ್ನುರಾಷ್ಟ್ರಭಕ್ತರನಾಗಿಸುವ ಕಾರ್ಯ ಶ್ಲಾಘನೀಯ. ಸಮಾಜದಲ್ಲಿ ಜಾತಿ ವೈಪರೀತ್ಯಗಳನ್ನು ಮೆಟ್ಟಿ ನಿಂತು, ಸಮಾನ ಭಾವದಿಂದ ಎಲ್ಲರನ್ನೂ ಮುಖ್ಯ ವಾಹಿನಿಯಲ್ಲಿ ತಂದು ನಿಲ್ಲಿಸುವಕಾರ್ಯ ಯೋಜನೆಗಳು ಆದರ್ಶಪ್ರಾಯವಾಗಿದೆ. ಈ ಸಾತ್ವಿಕ ಕಾರ್ಯಕ್ಕೆ ಪ್ರೇರಣೆಯಾಗಿ ಹಿಂದೂ ಸೇವಾ ಪ್ರತಿಷ್ಠಾನವನ್ನು ಹುಟ್ಟು ಹಾಕಿದ ಅಜಿತ್ ಪುಣ್ಯತಿಥಿಯ ಅಂಗವಾಗಿ ನಡೆಸುವ ಸೇವಾ ದಿನಾಚರಣೆಯು ಸಮಾಜದ ಎಲ್ಲರ ಜವಾಬ್ದಾರಿಯನ್ನು ನೆನಪಿಸುವಂತಿದೆ ಎಂದರು.

ಮುಖ್ಯ ಭಾಷಣ ಮಾಡಿದ ಶ್ರೀರಾಮ ಪ್ರಾಥಮಿಕ ಶಾಲೆಯ ಸಂಚಾಲಕ ಯು ಜಿ ರಾಧ, ಭವ್ಯ ಸಂಸ್ಕೃತಿ, ಭವ್ಯ ಪರಂಪರೆ ಭವ್ಯ ಇತಿಹಾಸವನ್ನು ಹೊಂದಿದ ನಮ್ಮಜೀವನ ಪದ್ದತಿಯಲ್ಲಿ ಹೊಕ್ಕಿರುವ ಹಲವು ಅನಿಷ್ಠ ಪದ್ದತಿಗಳಿಂದಾಗಿ ಸಮಾಜ ದುರ್ಬಲವಾಗಿದೆ. ಇಂತಹ ಅನಿಷ್ಠ ಪದ್ದತಿಗಳನ್ನು ಆರೋಗ್ಯಕರ ರೀತಿಯಲ್ಲಿ ನಿವಾರಿಸಿಕೊಂಡು, ಸಮಾಜವನ್ನು ಸುದೃಢವಾಗಿ ಬೆಳೆಸುವ ಯೋಜನೆ ಅಜಿತ್‌ಜೀಯವರದ್ದಾಗಿತ್ತು. ಅವರ ಆಶಯಗಳನ್ನು ಅನುಷ್ಠಾನಿಸಲು ಇಂದು ಸಾವಿರಾರು ಸೇವಾವ್ರತಿಗಳು ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ಅಗತ್ಯವುಳ್ಳವರಿಗೆ ಸಲ್ಲಿಸುವ  ಸೇವೆ ನಮ್ಮ ಜೀವನದ ದೇವನೊಲುಮೆಯ ಕಾರ್ಯವೆಂಬ ಸತ್ಯವನ್ನುಅಜಿತರು ಪ್ರತಿಪಾದಿಸಿದ್ದು, ಅದನ್ನುಎಲ್ಲರೂ ನಿತ್ಯಜೀವನದಲ್ಲಿ ಅನುಷ್ಠಾನಿಸಬೇಕೆಂದು ಕರೆ ನೀಡಿದರು.


ಇದೇ ಸಂಧರ್ಭದಲ್ಲಿ ಜೀವನೋಪಾಯಕ್ಕಾಗಿ ಕ್ಷೌರಿಕ ವೃತ್ತಿಯನ್ನು ನಡೆಸುತ್ತಿದ್ದರೂ, ತನ್ನ ಬಹು ಪಾಲು ಸಮಯವನ್ನು ಸಮಾಜದ ದುಃಖಿತರ ಸೇವೆಗೆ ಮೀಸಲಿರಿಸಿ, ಅವರುಗಳ ನೋವು ನಿವಾರಿಸುವ, ಮರಣದಂತಹ ಸಂದರ್ಭದಲ್ಲಿ ಮರಣೋತ್ತರ ವಿಧಿ ವಿಧಾನಗಳನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನೆರವೇರಿಸುವ, ತನ್ಮೂಲಕ ಸಮಾಜದ ಮಮತೆಯ ಮಗನಾಗಿರುವ ಹರೀಶ್ ಭಂಢಾರಿರವರ ಸೇವಾ ಗುಣವನ್ನು ಪರಿಗಣಿಸಿ, ಶಾಲು, ಫಲ-ಪುಷ್ಪ ತಾಂಬೂಲವನ್ನಿತ್ತು ಗೌರವಿಸಲಾಯಿತು.

ಪ್ರತಿಷ್ಠಾನದಲ್ಲಿ ಸೇವಾವ್ರತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಜಿಲ್ಲಾ ಸಹಾಯಕಿ ಭಗಿನಿ ಅಭಿಲಾಶಾ ಮಾತಾಜಿ ಹಾಗೂ ಯೋಗ ಶಿಕ್ಷಕಿಯಾಗಿ ನಿಯುಕ್ತಿಗೊಂಡ ಭಗಿನಿ ಮಾಲಾಶ್ರೀ ಮಾತಾಜಿಯವರಿಗೆ ಮಾತೃ ಮಂಡಲಿಯ ಮಾತೆಯರು ಮಡಿಲು ತುಂಬಿಸಿ ಅಭಿನಂದಿಸಿದರು.

ಶಿಶು ಮಂದಿರದ ಪುಟಾಣಿ ಮಕ್ಕಳ ಪ್ರಾರ್ಥನಾ ವಿಧಿವಿಧಾನಗಳೊಂದಿಗೆ ನಡೆದ ಕಾರ್ಯಕ್ರಮದಲ್ಲಿ, ಮಾತೃ ಮಂಡಳಿಯ ಸದಸ್ಯೆ ಶ್ರೀಮತಿ ನಂದಿನಿ ಸ್ವಾಗತಿಸಿದರು. ಶಿಶುಮಂದಿರದ ಮಾತಾಜಿ ಭಗಿನಿ ಪುಷ್ಪಲತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಶಿಶು ಮಂದಿರ ಸಮಿತಿಯ ಅಧ್ಯಕ್ಷ ಮನೋಜ್ ಶೆಟ್ಟಿ, ಉಪಾಧ್ಯಕ್ಷ ಯತೀಶ್ ಶೆಟ್ಟಿ, ಕೋಶಾಧಿಕಾರಿ ಜಗದೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಹರಿರಾಮಚಂದ್ರ, ಉಪ್ಪಿನಂಗಡಿ ಸಿ ಎ ಬ್ಯಾಂಕ್‌ ಅಧ್ಯಕ್ಷ ಭಾಸ್ಕರ ಆಚಾರ್ಯ ಮೊದಲಾದ ಗಣ್ಯರು ಉಪಸ್ಥಿತರಿದ್ದ್ದರು.

Highslide for Wordpress Plugin