ವಿದ್ಯಾರ್ಥಿಗಳಿಂದ ಗ್ರಾಮ ವಿಕಾಸ : ಗುರುರಾಜ್
ಪುತ್ತೂರು: ವಿದ್ಯಾರ್ಥಿಗಳ ಮೂಲಕ ಗ್ರಾಮವಿಕಾಸ ಮಾಡುವ ಕಾರ್ಯ ಉತ್ತಮವಾದ ವಿಚಾರ. ಪ್ರತಿ ಗ್ರಾಮ ಶಿಕ್ಷಣ, ಸಂಸ್ಕೃತಿಯ ವಿಚಾರದಲ್ಲಿ ಸ್ವಾವಲಂಬನೆಯನ್ನು ಹೊಂದಬೇಕು. ಸಾಮಾಜಿಕ ಸುರಕ್ಷೆ ಸಾಮರಸ್ಯವನ್ನು ಹುಟ್ಟಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ, ಗ್ರಾಮವಿಕಾಸದ ಪ್ರಾಂತ್ ಪ್ರಮುಖ್ ಗುರುರಾಜ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ವಿವೇಕಾನಂದ ಜಯಂತಿಯ ಪ್ರಯುಕ್ತ ಆಯೋಜಿಸಲಾದ ಗ್ರಾಮ ವಿಕಾಸ ಸಮಾಲೋಚನೆ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಶುಕ್ರವಾರ ಮಾತನಾಡಿದರು.


ಗ್ರಾಮ ಆಧುನೀಕತೆಯ ಸೋಗಿಗೆ ಮರುಳಾಗಿ ತನ್ನ ಸೊಗಡನ್ನು ಕಳೆದುಕೊಳ್ಳುತ್ತಿದೆ. ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸುವುದರೊಂದಿಗೆ ನಮ್ಮ ನೆಲದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಯುವಶಕ್ತಿ, ಮಾತೃಶಕ್ತಿ, ಸಜ್ಜನ ಶಕ್ತಿ, ಧಾರ್ಮಿಕ ಶಕ್ತಿ, ಸಂಘಟನಾ ಶಕ್ತಿ ಇವುಗಳನ್ನು ಬಳಸಿ ಗ್ರಾಮದ ಸಪ್ತಶಕ್ತಿಗಳನ್ನು ಉಳಿಸಬಹುದು ಎಂದು ಅಭಿಪ್ರಾಯ ಪಟ್ಟರು.
ಗ್ರಾಮಾಭಿವೃದ್ಧಿಗೆ ಮೂರು ಸೂತ್ರಗಳು – ಗುರುರಾಜ್
ಆಗಾಗ ಗ್ರಾಮಸ್ಥರು ಒಟ್ಟಾಗಿ ನಿಯಮಿತವಾಗಿ ಸೇರಬೇಕು, ಕೂತು ಮಾತಾಡುವ ವ್ಯವಸ್ಥೆ ಏರ್ಪಡಬೇಕು.
ಯುವಕ ಯುವತಿಯರ ಪಾಲ್ಗೊಳ್ಳುವಿಕೆ ಆಗಬೇಕು. ಕಾಲೇಜು ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ ಹೆಚ್ಚಬೇಕು.
ಬೇರೆ ಬೇರೆ ಕಡೆ ನಡೆದ ಒಳ್ಳೆಯ ಅಂಶಗಳನ್ನು ಅಳವಡಿಸಬೇಕು. ಇದರ ಕುರಿತು ಅಧ್ಯಯನ ಮಾಡಿ ಪ್ರವಾಸ ಕೈಗೊಳ್ಳಬೇಕು. ಬೇರೆ ಬೇರೆ ಕ್ಷೇತ್ರದಲ್ಲಿ ಸಾದನೆಮಾಡಿದಂತಹ ಜನರನ್ನು ಕರೆತಂದು ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸೇವಾ ಪ್ರಮುಖ್ ಗೋಪಾಲ ಚೆಟ್ಟಿಯಾರ್ ಮಾತನಾಡಿ, ಸಾರ್ವಜನಿಕ ಸಂಪತ್ತು ತಮ್ಮದೆಂದ ಭಾವನೆ ಜನರಲ್ಲಿ ಉಂಟಾಗಬೇಕು. ಆಗ ಮಾತ್ರ ಆರೋಗ್ಯವಂತ, ಸ್ವಚ್ಛ ಗ್ರಾಮವನ್ನು ನಿರ್ಮಾಣ ಮಾಡಬಹುದು. ವೃಕ್ಞಗಳು ಸತ್ವ ಪುರುಷದಂತೆ, ಅದರಲ್ಲಿ ಅನೇಕ ಔಷದೀಯ ಗುಣಗಳಿವೆ. ಆದ್ದರಿಂದ ಗಿಡಗಳನ್ನು ನೆಟ್ಟು ಬೆಳೆಸಬೇಕು. ಹಸಿರಿದ್ದಾಗ ಮಾತ್ರ ಮಳೆ, ಬೆಳೆ, ಜೀವ ಜೀವನ ಎಲ್ಲಾ ಎಂದು ನುಡಿದರು.
ಮಣಿಪಾಲ್ ತಾಂತ್ರಿಕ ವಿಶ್ವವಿದ್ಯಾಲಯದ ಉಪನ್ಯಾಸಕ ನಾರಾಯಣ ಶೆಣೈ ’ಬನ್ನಿ ಮೊಡಗಳೇ’ ನಿಸರ್ಗ ಗೀತೆಯನ್ನು ಹಾಡಿ, ಆ ಮೂಲಕ ಗ್ರಾಮಸ್ಥರಿಗೆ ನಿಸರ್ಗ ಹಾಗೂ ನೀರಿನ ಮಹತ್ವ ತಿಳಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವರ್ಯ ಸೇವಕ ಸಂಘದ ಕರ್ನಾಟಕ ಪ್ರಾಂತದ ಸ್ವಯಂಸೇವಕ ಡಾ. ಸುಬ್ರಾಯ ನಂದೋಡಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ್ ಭಟ್, ಉಪಸ್ಥಿತರಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಮಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಸ್ವಾಗತಿಸಿ, ವಿವೇಕಾನಂದ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಜೀವನ್ದಾಸ್ ವಂದಿಸಿದರು. ಉಪನ್ಯಾಸಕಿ ಯಶವಂತಿ ಕಾರ್ಯಕ್ರಮ ನಿರೂಪಿಸಿದರು.
 
															 
															 
															 
															 
															