ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಲ್ಲಿ ಭಾರತೀಯರೆಲ್ಲರೂ ಸಹೋದರರಂತೆ ಪರಸ್ಪರ ಸಾಮರಸ್ಯದಿಂದ ಜೀವಿಸಿದರೆ ಭಾರತ ಅಭಿವೃದ್ಧಿಯಾಗುವುದು. ರಕ್ಷಾಬಂಧನ ಉತ್ಸವ ಆಚರಿಸುವ ಮೂಲಕ ಜಾತಿ, ಮತ, ಭಾಷೆ ಎಂಬ ಭೇದವಿಲ್ಲದೆ ಎಲ್ಲರೂ ಒಗ್ಗಟ್ಟಿನಿಂದ ಬಾಳುವಂತಾಗಬೇಕು, ಒಳಗಿನ ಭಿನ್ನಮತಗಳನ್ನು ಹೊರಗಿನ ಶತ್ರುಗಳನ್ನು ಏಕತೆಯಿಂದ ಎದುರಿಸಬೇಕೆಂದು ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಪರಮೇಶ್ವರ ಹೆಗ್ಡೆ ಹೇಳಿದರು.
ಅವರು ಶ್ರೀರಾಮ ಪ್ರೌಢಶಾಲೆಯಲ್ಲಿ ನಡೆದ ರಕ್ಷಾಬಂಧನ ಮತ್ತು ಸಂಸ್ಕೃತೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸಂಸ್ಕೃತ ಕಲಿಯುವುದರಿಂದ ಸುಸಂಸ್ಕೃತರಾಗುತ್ತೇವೆ. ಭಾಷೆಯ ಬಳಕೆಯಿಂದ ಭಾಷೆ ಉಳಿಯುತ್ತದೆ. ಮಾತಿನಲ್ಲಿ ನಯವಿನಯವಿದ್ದಾಗ ಮಾತ್ರ ಉಳಿದವರ ಮನ ಪರಿವರ್ತನೆಯಾಗುವುದು ಎಂದು ಹೆಗ್ಡೆ ತಿಳಿಸಿದರು.
ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಡಾ|| ಪ್ರಭಾಕರ ಭಟ್, ಗೋಳ್ತಮಜಲು ಪಂಚಾಯತ್ ಸದಸ್ಯ ಮೋನಪ್ಪ ದೇವಸ್ಯ, ಕಾರ್ಯ ನಿರ್ವಹಣಾಧಿಕಾರಿ ವಸಂತಮಾಧವ, ಮುಖ್ಯೋಪಾಧ್ಯಾಯರಾದ ರಮೇಶ್ ಎನ್. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶೋಭಾ ಆರ್.ಶೆಟ್ಟಿ, ಶರೀಫ್ ಹಾಜಿ, ಹನೀಫ್, ಮಜೀದ್, ಫಾರೂಕ್, ಅನಂತ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪೂಜಾ ಆರ್. ಶೆಟ್ಟಿ ೮ ಏಕಲವ್ಯ ಸ್ವಾಗತಿಸಿ, ರಕ್ಷಾ ೮ ಏಕಲವ್ಯ ನಿರೂಪಿಸಿ, ಮೇದಿನಿ 8 ಏಕಲವ್ಯ ವಂದಿಸಿದರು.