ಸಾವಿರಾರು ವಿದ್ಯಾರ್ಥಿಗಳು ಸಮಾಜಕ್ಕಾಗಿ ಬದುಕುವಂತೆ ಪ್ರೇರೇಪಿಸುವ ರಾಷ್ಟ್ರಪ್ರೇರಿತ ಭಾರತೀಯ ಶಿಕ್ಷಣವನ್ನು ವಿದ್ಯಾಕೇಂದ್ರ ನೀಡುತ್ತಿದೆ. ಈ ರೀತಿಯಲ್ಲಿ ರಾಷ್ಟ್ರೀಯ ದೃಷ್ಟಿಕೋನ, ಸಂಸ್ಕಾರಯುತ ಶಿಕ್ಷಣ ಶಾಲೆಯಲ್ಲಿ ಮಾತ್ರ ಸೀಮಿತವಾಗದೇ, ಮನೆಯಲ್ಲಿ ಅವುಗಳನ್ನು ಮುಂದುವರೆಸುವಂತೆ ಪೋಷಕರು ತಮ್ಮ ಮಕ್ಕಳಿಗೆ ಪ್ರೇರಣೆ ನೀಡುವುದು ಅವಶ್ಯಕ. ಈ ರೀತಿಯಾದಾಗ ಮಾತ್ರ ಮಗುವಿನ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆ ಸಾಧ್ಯ ಎಂದು ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಡಾ||ಪ್ರಭಾಕರಭಟ್ ಕಲ್ಲಡ್ಕ ತಿಳಿಸಿದರು. ಅವರು ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ದಿನಾಂಕ: 4-8-2015 ರಂದು ನಡೆದ ವಿಭಾಗದ ಪೋಷಕರ ಸಭೆಯನ್ನುದ್ದೇಶಿಸಿ ಮಾರ್ಗದರ್ಶನ ನೀಡಿದರು.
ಪೋಷಕರ ಪರವಾಗಿ ಮಾತನಾಡಿದ ಶ್ರೀ ರಾಕೋಡಿ ಈಶ್ವರಭಟ್ರವರು ಅಧ್ಯಾಪಕರ ಆಡಳಿತ ಮಂಡಳಿ ಶ್ರಮದಿಂದ ನನ್ನ ಮಕ್ಕಳು ಉತ್ತಮ ಸಂಸ್ಕಾರದೊಂದಿಗೆ ಉತ್ತಮ ಅಂಕ ಪಡೆದು ತೇರ್ಗಡೆ ಹೊಂದಿದ್ದಾರೆ. ಇದು ನನ್ನನ್ನು ಅತ್ಯಂತ ಸಂತೋಷಕರವಾಗಿಸಿದೆ ಎಂದು ತಿಳಿಸಿದರು. ಶ್ರೀಮತಿ ವಾರಿಜ, ಶ್ರೀಮತಿ ಇರಾ ಶೆಟ್ಟಿ, ಶ್ರೀಮತಿ ಪ್ರೇಮಲತಾ, ಅಭಿಪ್ರಾಯ ಹಂಚಿಕೊಂಡರು.
ವೇದಿಕೆಯಲ್ಲಿ ಪೊಳಲಿ ರಾಮಕೃಷ್ಣ ತಪೋವನ ಸ್ವಾಮಿಗಳಾದ ಚೈತನ್ಯಾನಂದ ಸ್ವಾಮೀಜಿ, ಪದ್ಮಾನಂದ ಸ್ವಾಮೀಜಿ, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ಶ್ರೀ ನಾರಾಯಣ ಸೋಮಯಾಜಿ, ವಿದ್ಯಾಕೇಂದ್ರದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ವಸಂತಮಾಧವ, ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಶ್ರೀ ವಿಶ್ವನಾಥ ಪ್ರಭು, ಕಾರ್ಯದರ್ಶಿ ಶ್ರೀ ಮುತ್ತಪ್ಪಮೂಲ್ಯ, ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ರಮೇಶ್ ಶ್ರೀಮಾನ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 8, 9, 10 ನೇ ವಿಭಾಗದ ವರದಿಯನ್ನು ಮಂಡಿಸಲಾಯಿತು. ಶ್ರೀ ಜಯಾನಂದ ಪೆರಾಜೆ 10 ನೇ ತರಗತಿ, ಶ್ರೀ ಗೋಪಾಲ್ ಶ್ರೀಮಾನ್ 9 ನೇ ತರಗತಿ, ಶ್ರೀಮತಿ ಸಂಧ್ಯಾ 8 ನೇ ತರಗತಿ ವರದಿ ಮಂಡಿಸಿದರು. ಕಾರ್ಯಕ್ರಮದಲ್ಲಿ ಶ್ರೀ ರಮೇಶ್ ಶ್ರೀಮಾನ್ ಸ್ವಾಗತಿಸಿ, ಶ್ರೀಮತಿ ಶಾಂಭವಿ ವಂದಿಸಿ, ಶ್ರೀ ಜಿನ್ನಪ್ಪ ಶ್ರೀಮಾನ್ ಕಾರ್ಯಕ್ರಮ ನಿರೂಪಿಸಿದರು.