ರಾಷ್ಟ್ರೀಯ ಶಿಕ್ಷಣ ನೀತಿ 2020 – ಮಾಹಿತಿ ಕಾರ್ಯಾಗಾರ

Leaf
Leaf

ನೀತಿಯನ್ನು ಹೆಮ್ಮೆ ಮತ್ತು ಗರ್ವದಿಂದ ಸ್ವೀಕರಿಸಲು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಪಿ. ಎಸ್. ಯಡಪಡಿತ್ತಾಯ ಕರೆ

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ವತಿಯಿಂದ ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರುತ್ತಿರುವ “ರಾಷ್ಟ್ರೀಯ ಶಿಕ್ಷಣ ನೀತಿ – 2020” ಕುರಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ವಿದ್ಯಾ ಭಾರತಿ ಸಹಯೋಗದೊಂದಿಗೆ ಸೆಪ್ಟೆಂಬರ್ 26 ರಂದು ವಿವೇಕಾನಂದ ಪದವಿ ಕಾಲೇಜಿನ ಸುವರ್ಣಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ಎಸ್. ಯಡಪಡಿತ್ತಾಯ “ಶಿಕ್ಷಣದಲ್ಲಿ ಭಾರತೀಯತೆಯನ್ನು ಮತ್ತೊಮ್ಮೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ತರವಾದ ನೀತಿ ಇದಾಗಿದ್ದು, ಮಗುವಿನಲ್ಲಿ ಗುಣಾತ್ಮಕತೆ ಹಾಗೂ ರಾಷ್ಟ್ರೀಯತೆಯನ್ನು ಬೆಳೆಸುವ ನಿರ್ಧಿಷ್ಟ ಗುರಿಯನ್ನು ಹೊಂದಿರುತ್ತದೆ. ‘ಯಾಕೆ’ ಎನ್ನುವ ಪ್ರಶ್ನಾರ್ಥಕ ಮನೋಭಾವಕ್ಕಿಂತಲೂ ‘ಹೇಗೆ ಅಲೋಚಿಸಬೇಕು’ ಎಂಬ ಕ್ರೀಯಾತ್ಮಕ ಚಿಂತನೆಯನ್ನು ಬಾಲ್ಯದಿಂದಲೇ ಬೆಳೆಸಲಾಗುತ್ತದೆ. ಮಗುವಿನ ಕಲಿಕೆ ಕೇವಲ ಉದ್ಯೋಗ ಮತ್ತು ಹಣ ಸಂಪಾದನೆಗೆ ಸೀಮಿತವಾಗಿರದೆ, ಕೌಶಲ್ಯವನ್ನು ಒಡಮೂಡಿಸುವ ಕಾರ್ಯವನ್ನು ಯೋಜನೆಯನ್ನು ಹೊಸ ಶಿಕ್ಷಣ ನೀತಿಯಲ್ಲಿ ಹೊಂದಿದೆ. ಭಾರತೀಯರಾದ ನಾವೆಲ್ಲ ಹೆಮ್ಮ ಮತ್ತು ಗರ್ವದಿಂದ ಈ ನೀತಿಯನ್ನು ಸ್ವೀಕರಿಸಿ ಒಂದಾಗಿ ಕಾರ್ಯನಿರ್ವಹಿಸೋಣ” ಎಂದರು

ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಶ್ರೀ ಅರುಣ್ ಶಹಾಪುರ “ಮಗುವಿಗೆ ಮಾತೃ ಭಾಷೆ, ಆಡು ಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಬೇಕೆನ್ನುವುದು ಹೊಸ ಶಿಕ್ಷಣ ನೀತಿಯ ಆಶವಾಗಿದೆ, ಶಿಕ್ಷಣ ವ್ಯವಸ್ಥೆಗೆ ಭ್ರಷ್ಟಚಾರ ಇತ್ಯಾದಿಗಳಿಂದ ಮುಕ್ತಿ ನೀಡಿ, ಅಲ್ಲಿ ಶೈಕ್ಷಣಿಕ ವಿಷಯಗಳ ಬಲವರ್ಧನೆಗೆ ಬೇಕಾದ ವಾತಾವರಣವನ್ನು ಈ ನೀತಿಯ ಮೂಲಕ ಸೃಷ್ಟಿಲಾಗುತ್ತಿದೆ. 1ನೇ ಹಂತ ಪೂರ್ವ ಪ್ರಾಥಮಿಕದ ಮೂರು ವರ್ಷಗಳು, ಒಂದನೆ ತರಗತಿ & ಎರಡನೆ ತರಗತಿ, 2ನೇ ಹಂತ ಮೂರರಿಂದ ಐದನೆ ತರಗತಿ, 3ನೇ ಹಂತ ಆರರಿಂದ ಎಂಟನೆ ತರಗತಿ, 4ನೇ ಹಂತ ಎಂಟರಿAದ ಹನ್ನೆರಡನೆ ತರಗತಿ, ಹೀಗೆ 5+3+3+4 ಹಂತಗಳಲ್ಲಿ ಮೂರನೆ ವಯಸ್ಸಿನಿಂದ 18ನೆ ವಯಸ್ಸಿನವರೆಗಿನ ಕಡ್ಡಾಯ ಶಿಕ್ಷಣವಿರುತ್ತದೆ. ಆರನೆ ತರಗತಿಯಿಂದ ವಿದ್ಯಾರ್ಥಿ ಪಠ್ಯದ ಜೊತೆಗೆ ತನಗಿಷ್ಟವಾದ ಒಂದು ಸ್ಥಾನೀಯ ಕೌಶಲ್ಯ ಅಧ್ಯಯನ ಮಾಡಬಹುದಾಗಿದೆ. ಬದಲಾದ ಸಂದರ್ಭದಲ್ಲಿ ಶಿಕ್ಷಕರಿಗೆ ಬೇಕಾದ ತರಬೇತಿ ನೀಡಲು ಸರಿಯಾದ ಯೋಜನೆಯನ್ನು ನೀತಿಯಲ್ಲಿ ಹೇಳಲಾಗಿದೆ. ಶಾಲೆಗಳು ತಮ್ಮ ಗುಣಾತ್ಮಕತೆ ಹೆಚ್ಚಿಸಿಕೊಳ್ಳುವ ಉದ್ಧೇಶದಿಂದ ‘ಶಾಲಾ ಸಂಕುಲಗಳ’ ರಚನೆ ಸೇರಿದಂತೆ ಅನೇಕ ಯೋಜನೆ ರೂಪಿಸಲಾಗಿದೆ. ಈ ಎಲ್ಲಾ ಬದಲಾವಣೆಗಳು ಮತ್ತು ಬೆಳವಣಿಗೆಗೆ ಶಿಕ್ಷಕರು ತೆರೆದುಕೊಳ್ಳಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳು ಕೂಡ ಸರಿಯಾದ ತಯಾರಿ ಮಾಡಿಕೊಳ್ಳಬೇಕು” ಎಂದರು.

ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರೂ, ಮಣಿಪಾಲ ತಾಂತ್ರಿಕಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಕರುಣಾಕರ್ ಈಗಿರುವ ದೇಶದ ಉನ್ನತ ಶಿಕ್ಷಣದ ಸ್ಥಿತಿಯನ್ನು ಸಭೆಯ ಮುಂದಿಟ್ಟರು. ರಾಷ್ಟ್ರೀಯ ಶಿಕ್ಷಣ ನೀತಿ – 2020 ರಲ್ಲಿ ಉನ್ನತ ಮಟ್ಟದ ವಿಶ್ವವಿದ್ಯಾಲಯಗಳು ಸ್ವಯಂಕಲಿಕಾ ಕೇಂದ್ರಗಳಾಗಿ ವ್ಯಕ್ತಿಯ ಕೌಶಲ್ಯಾಭಿವೃದ್ಧಿಯತ್ತ ಸಂಪೂರ್ಣ ಗಮನ ನೀಡಲಿದೆ. ಈಗಿರುವ ಉನ್ನತ ಶಿಕ್ಷಣದ ಸ್ವರೂಪದಲ್ಲಿ ಬದಲಾವಣೆಗಳಾಗಲಿದ್ದು, ಪದವಿ ಹಂತದಲ್ಲಿ ಪ್ರತಿ ವರ್ಷಕ್ಕೂ ಪ್ರಾಮಾಣಿತ ಮಾನ್ಯತೆ ಸಿಗಲಿದೆ. ಶಿಕ್ಷಣ ಮೊಟಕುಗೊಳಿಸಿದರು ವಿದ್ಯಾರ್ಥಿಗೆ ಸರ್ಟಿಫಿಕೆಟ್ ಸಿಗಲಿದೆ. ಮೊಟಕುಗೊಳಿಸಿದ ಶಿಕ್ಷಣವನ್ನು ಮತ್ತೆ ಪ್ರಾರಂಭಿಸಲು ಅವಕಾಶ ನೀಡಲಾಗಿದೆ. ತರಗತಿ ಪಾಠಕ್ಕಿಂತ ಅನುಭವಕ್ಕೆ ಆದ್ಯತೆ ನೀಡಲಾಗಿದೆ. ವಿದ್ಯಾರ್ಥಿಗೆ ಇಷ್ಟವಾಗಿರುವ ವಿಷಯಗಳನ್ನೆ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆಯನ್ನು ಈ ನೀತಿ ಪುರಸ್ಕರಿಸುತ್ತಿದೆ. ವೈದ್ಯಕೀಯ ಮತ್ತು ಕಾನೂನು ಹೊರತುಪಡಿಸಿ ಎಲ್ಲಾ ರೀತಿಯ ಶಿಕ್ಷಣದ ರೆಗ್ಯೂಲೇಟಿಂಗ್ ಅಥಾರಿಟಿಗಳು ಏಕತ್ರಿತಗೊಳ್ಳಲಿವೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ಅಧ್ಯಕ್ಷರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ “ಮಾತೃಭಾಷಾ ಶಿಕ್ಷಣವೂ ಮಗುವಿನ ಭಾವನೆಯನ್ನು ಅರಳಿಸುತ್ತದೆ, ನಮಗೆ ಅಮೇರಿಕಾ, ಜಪಾನ್, ರಷ್ಯಾಗಳನ್ನು ನಾವು ಉದಾಹರಿಸಬೇಕಿಲ್ಲ. ನಮ್ಮ ದೇಶದ ಜ್ಞಾನ ಮತ್ತು ಮಹತ್ತರ ಸಾಧನೆಗಳು ಜಾಗೃತವಾದರೆ ನಾವು ವೃಭವವನ್ನು ಕಾಣುತ್ತೇವೆ. ಆ ಹಿನ್ನಲೆಯಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ – 2020’ ಮಹತ್ತರ ಕೊಡುಗೆ ನೀಡುವಂತಾಗಲಿ” ಎಂದರು.

ಮುಖ್ಯ ಅತಿಥಿಯಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಹರ್ಷ ನಾರಾಯಣ, ವಿದ್ಯಾಭಾರತಿಯ ರಾಜ್ಯ ಕಾರ್ಯದರ್ಶಿ ಶ್ರೀ ವಸಂತಮಾಧವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ ಕೃಷ್ಣ ಭಟ್ ಸ್ವಾಗತಿಸಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ವಿಭಾಗ ಪ್ರಮುಖ್ ಶ್ರೀ ಕೇಶವ ಬಂಗೇರಾ ವಂದಿಸಿದರು. ಕಾರ್ಯಕ್ರಮದಲ್ಲಿ ಕನಾಟಕ ವಿಧಾನ ಪರಿಷತ್‌ನ ಮಾಜಿ ಸದಸ್ಯರಾದ ಶ್ರೀ ಬಾಲಕೃಷ್ಣ ಭಟ್, ಅಖಿಲ ಭಾರತೀಯ ರಾಷ್ಟ್ರೀಯ ಶಿಕ್ಷಣ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ಶಿವಾನಂದ ಸಿಂಧನಕೇರಾ, ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಶ್ರೀ. ಕೆ. ರಮೇಶ್ ಉಪಸ್ಥಿತರಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವಿದ ಶಿಕ್ಷಣ ಸಂಸ್ಥೆಗಳ ಆಡಳಿತ ಸಮಿತಿಯ ಪದಾಧಿಕಾರಿಗಳು, ಪ್ರಾಂಶುಪಾಲರುಗಳು, ಮುಖ್ಯೋಪಾಧ್ಯಾಯರುಗಳು, ಬೋಧಕ/ ಬೋಧಕೇತರ ವೃಂದ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ವಿದ್ಯಾಭಾರತಿಯ ಪದಾಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ಪಡೆದರು.

Leave a Reply

Your email address will not be published. Required fields are marked *

Related News

News and Events
07/03/2025

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

News and Events
07/03/2025

Five-Day Faculty Development Program

News and Events
07/03/2025

ವಿವೇಕಾನಂದಪಾಲಿಟೆಕ್ನಿಕ್ನಲ್ಲಿ “ Software engineering-The Essence”  ಬಗ್ಗೆಮಾಹಿತಿಶಿಬಿರ