
ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ 28.2.2025ರಂದು ಸರ್.ಸಿ.ವಿ. ರಾಮನ್‍ರವರ ‘ರಾಮನ್ ಪರಿಣಾಮ’ ಆವಿಷ್ಕಾರದ ಸ್ಮರಣಾರ್ಥವಾಗಿ ಆಚರಿಸುವ “ರಾಷ್ಟ್ರೀಯ ವಿಜ್ಞಾನ ದಿನಾಚರಣೆ” ಮತ್ತು ‘ಜ್ಞಾನಧಾರ’ ವೈವಿಧ್ಯಮಯ ವಿಜ್ಞಾನ ಪ್ರದರ್ಶನ ಕಾರ್ಯಕ್ರಮ ನಡೆಯಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷÀ ಡಾ.ಪ್ರಭಾಕರ ಭಟ್ ಕಲ್ಲಡ್ಕ ಇವರು ಮಾತನಾಡಿ “ವಿಜ್ಞಾನ ಜೀವನದ ಒಂದು ಭಾಗ. ವಿಜ್ಞಾನ ದೇಹದ ಒಳಗೂ ಇದೆ ಹೊರಗೂ ಇದೆ. ಮಿಕ್ಸಿ ಹೇಗೆ ರುಬ್ಬುವ ಕೆಲಸ ಮಾಡುತ್ತದೆಯೋ ಅದೇ ರೀತಿ ಜೀರ್ಣಕ್ರಿಯೆಯು ದೇಹದ ಒಳಗೆ ನಡೆಯುತ್ತದೆ. ದೇಹಕ್ಕೆ ಬೇಕಾದ ಸತ್ವವನ್ನು ತೆಗೆದುಕೊಂಡು ಬೇಡದ ವಸ್ತುವನ್ನು ಹೊರಗೆ ಹಾಕುತ್ತದೆ. ವಿಜ್ಞಾನಕ್ಕೆ ಭಾರತೀಯರ ಕೊಡುಗೆ ಅಪಾರ. ಸೂರ್ಯ-ಚಂದ್ರರ ಚಲನೆ, ಭೂಮಿಯ ಆಕಾರ, ವ್ಯಾಸ, ಗಾತ್ರ, ಸುತ್ತಳತೆಯ, ಕುರಿತು ಪ್ರಾಚೀನ ಭಾರತೀಯ ವಿಜ್ಞಾನಿಗಳು ಮೊದಲೇ ತಿಳಿಸಿದ್ದರು. ಇತ್ತೀಚೆಗೆ ನಡೆದ ಕುಂಭಮೇಳವು ಯಾವಾಗ ನಡೆಯಬೇಕು ಅನ್ನುವುದು ಮೊದಲೇ ನಿರ್ಧರಿತವಾಗಿತ್ತು. ಅದನ್ನು ಗ್ರಹಗತಿಗಳ ಆಧಾರದ ಮೇಲೆ ನಡೆಸಲಾಗುತ್ತದೆ. ವಿಜ್ಞಾನದ ಪ್ರಕ್ರಿಯೆಗಳು ಏನು ನಡೆಯುತ್ತದೆಯೋ ಅದನ್ನು ಮೊದಲೆ ಸಾಧನೆ ಮಾಡಿ ತೋರಿಸಿದವರು ಭಾರತೀಯ ಪ್ರಾಚೀನ ವಿಜ್ಞಾನಿಗಳು. ಚಂದ್ರಲೋಕಕ್ಕೆ ಕಳುಹಿಸಿದ ಉಪಗ್ರಹವು ದಕ್ಷಿಣ ಧ್ರುವದಲ್ಲಿ ಇಳಿದ ಮೇಲೆ ಹದಿನಾಲ್ಕು ದಿನಗಳ ನಂತರ ಮತ್ತೆ ಉಪಗ್ರಹವನ್ನು ಸೇರಿತು. ಇದನ್ನು ಹಗಲು/ರಾತ್ರಿ ಎಂದು ವಿಜ್ಞಾನಿಗಳು ಬಿಂಬಿಸಿದರೆ, ಪೂರ್ವಜರು ಕೃಷ್ಣ ಪಕ್ಷ ಮತ್ತು ಶುಕ್ಲ ಪಕ್ಷ ಎಂದು ಮೊದಲೇ ತಿಳಿಸಿದ್ದರು. ವಿಜ್ಞಾನಿಗಳು ಜನರ ಅಭ್ಯುದಯಕ್ಕೆ ಬೇಕಾದುದನ್ನು ಸಂಶೋಧನೆ ಮಾಡುತ್ತಾರೆ. ಇಂತಹ ಶ್ರೇಷ್ಟ ಭಾರತದಲ್ಲಿ ಹುಟ್ಟಿದ ನಾವು ಈ ದೇಶದ ಹಿತಕ್ಕಾಗಿ ಅನೇಕ ಸಂಶೋಧನೆಗಳನ್ನು, ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿ.” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರಿಗೆ ಗಿಡ ನೀಡುವುದರ ಮೂಲಕ ಸ್ವಾಗತಿಸಲಾಯಿತು.
ನಂತರ ಮೆರಿಟ್ ಪ್ರಶಸ್ತಿಗೆ ಭಾಜನರಾದ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ ಪ್ರಧಾನ ಕಛೇರಿಯಾದ ಅಂತರಿಕ್ಷ ಭವನದ ಸಿವಿಲ್ ಇಂಜಿನಿಯರಿಂಗ್ ಪ್ರೋಗ್ರಾಮ್ ಕಛೇರಿಯ ಎಸಿ ವಿಭಾಗದಲ್ಲಿ ಹವಾನಿಯಂತ್ರಕದ ವಿನ್ಯಾಸ, ಯೋಜನೆ ಮತ್ತು ಎಸಿಯ ಯಾಂತ್ರಿಕ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿರುವ ಗಣೇಶ್ ಬೆಂಗಳೂರು ಹಾಗೂ ನಯನಾ ಗಣೇಶ್, ಜಿಲ್ಲಾ ಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ ಪುರಸ್ಕ್ರತ ರಾಮ್ ಕಿಶೋರ್ ಕೆ.ಮಂಚಿ ಹಾಗೂ ಕೆ.ಜಿ. ಚಂದ್ರಶೇಖರ ಗಿರಿನಿವಾಸ ಅವರಿಗೆ ಶಾಲಾ ಸಂಸ್ಥಾಪಕರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.

ಜಿಲ್ಲಾ ಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ ಪುರಸ್ಕ್ರತ ರಾಮ್ ಕಿಶೋರ್ ಕೆ.ಮಂಚಿ ಮಾತನಾಡಿ, “ಕೃಷಿ ಕೂಡ ಒಂದು ವಿಜ್ಞಾನ. ಕೃಷಿಯಲ್ಲಿ ಆಸಕ್ತಿ ಉಂಟಾಗಬೇಕು ಎನ್ನುವ ಉದ್ದೇಶದಿಂದ ಪ್ರತಿ ವಿಜ್ಞಾನ ದಿನಾಚರಣೆಗೆ ಕೃಷಿಕರನ್ನು ಆಹ್ವಾನಿಸುವ ಕಾರ್ಯವನ್ನು ಶ್ರೀರಾಮ ಶಾಲೆ ಹಮ್ಮಿಕೊಳ್ಳುತ್ತಾ ಬಂದಿದೆ. ಇಲ್ಲಿ ಸಿಗುವಂತಹ ಅವಕಾಶಗಳನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಳ್ಳಿ.” ಎಂದರು.
ಕಾರ್ಯಕ್ರಮದಲ್ಲಿ ವಿಜ್ಞಾನ ದಿನಾಚರಣೆಯ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು.
7ನೇ ತರಗತಿಯ ಮಾನಸ ಪ್ರೇರಣಾ ಗೀತೆ ಹಾಡಿದರು. ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಅಧ್ಯಾಪಕರಾದ ಅಕ್ಷತಾ ಬಹುಮಾನ ವಾಚಿಸಿದರು.
ನಂತರ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ-ಗಣಿತ ಮಾದರಿ ಪ್ರದರ್ಶನಕ್ಕೆ ನಿವೃತ್ತ ಇಸ್ರೊ ವಿಜ್ಞಾನಿ ಗಣೇಶ್ ಬೆಂಗಳೂರು ರಾಕೆಟ್ ಉಡಾವಣೆಯ ಮೂಲಕ ಚಾಲನೆ ನೀಡಿದರು. ನಂತರ ವಿದ್ಯಾರ್ಥಿಗಳಿಂದ ವಿವರಣೆಗಳನ್ನು ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಔಷಧೀಯ ಸಸ್ಯಗಳ ಪ್ರದರ್ಶನ, ವನಫಲಗಳು(ಕಾಡಿನ ಹಣ್ಣುಗಳು), ತರಕಾರಿ ಗಿಡಗಳ ವಿಶೇಷ ಪ್ರದರ್ಶನ ನಡೆಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ನಿವೃತ್ತ ಇಸ್ರೊ ವಿಜ್ಞಾನಿ ಗಣೇಶ್ ಬೆಂಗಳೂರು ಹಾಗೂ ಸಹಧರ್ಮಿಣಿ ನಯನಾ ಗಣೇಶ್, ವ್ಯವಸ್ಥಾಪಕ ಪ್ರಕಾಶ್ ಪಿ, ಜಿಲ್ಲಾ ಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಪ್ರಶಸ್ತಿ ಪುರಸ್ಕ್ರತ ಕೆ.ಜಿ. ಚಂದ್ರಶೇಖರ ಗಿರಿನಿವಾಸ, ಅಟಲ್ ಟಿಂಕರಿಂಗ್ ಲ್ಯಾಬ್ ಸಂಯೋಜಕಿ ಶ್ರೀನಿಜ, ತಾಲೂಕು ಪಂಚಾಯತ್ ಉದ್ಯೋಗಿ ಅಶೋಕ್ ಬರಿಮಾರು, ಶ್ರೀರಾಮ ವಿದ್ಯಾಕೇಂದ್ರದ ಸಹಸಂಚಾಲಕ ರಮೇಶ್ ಎನ್, ಹಾಗೂ ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಚಿನ್ಮಯಿ ಎಸ್. ಶೆಟ್ಟಿ ನಿರೂಪಿಸಿ, ಪಿ.ಸುಶ್ಮಿತಾ ಭಟ್ ಸ್ವಾಗತಿಸಿ, ಪ್ರಾಪ್ತಿ ವಂದಿಸಿದರು.



