ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ನೆಹರು ನಗರದ ವಿವೇಕಾನಂದ ಕ್ಯಾಂಪಸ್‌ನಲ್ಲಿ ಆಯೋಜಿಸಿದ ಬೃಹತ್ ಉದ್ಯೋಗ ಮೇಳದ ಉದ್ಘಾಟನೆಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವ ರಾಜೀವ್ ಪ್ರತಾಪ್ ರೂಢಿಯವರನ್ನು ಆಹ್ವಾನಿಸಲಾಗಿತ್ತು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಸಂಜೆ ಸಚಿವ ಸಂಪುಟ ಸಭೆ ಕರೆದಿರುವ ಹಿನ್ನಲೆಯಲ್ಲಿ ಅವರಿಗೆ ಉದ್ಯೋಗ ಮೇಳಕ್ಕೆ ಬರಲಾಗಿರಲಿಲ್ಲ. ಆದರೆ ಸ್ಕೈಪ್ ಮೂಲಕ ಉದ್ಯೋಗ ಮೇಳಕ್ಕೆ ಆಗಮಿಸಿದ್ದ ನೆರೆದವರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ದೇಶದಲ್ಲಿ ಕಂಪ್ಯೂಟರ್‌ಗಳು ಬರಲಾರಂಭಿಸಿದ ಹೊತ್ತಿಗೆ ಅವು ಉದ್ಯೋಗಗಳನ್ನು ಕಡಿತಗೊಳಿಸುತ್ತವೆ ಎಂಬ ಆತಂಕವಿತ್ತು ಹಾಗೂ ಅನೇಕರು ಅದರ ಬಳಕೆಯನ್ನು ಪ್ರತಿಭಟಿಸಿದ್ದರು. ಆದರೆ ಇಂದು ಮಾಹಿತಿ ತಂತ್ರಜ್ಞಾನವಿಲ್ಲದೆ ನಮ್ಮ ಜೀವನವನ್ನು ಸಾಗಿಸಲಾರೆವು ಎನ್ನುವಷ್ಟರ ಮಟ್ಟಿಗೆ ನಾವು ಬಂದು ತಲಪಿದ್ದೇವೆ ಎಂದು ನುಡಿದರು.
ಯುವಸಮುದಾಯದ ಕೌಶಲ್ಯಾಭಿವೃದ್ಧಿ ಒಂದು ರಾಷ್ಟ್ರೀಯ ಆಂದೋಲನವಾಗಿ ಮೂಡಿಬರುತ್ತಿದೆ. ಅಂತೆಯೇ ಅವರುಗಳಿಗೆ ಉದ್ಯೋಗ ನೀಡುವ ಹಿನ್ನಲೆಯಲ್ಲಿ ಉದ್ಯೋಗ ಮೇಳಗಳೂ ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಪುತ್ತೂರಿಗೆ ಬರುವ ಆಸಕ್ತಿಯಿದೆ. ಮತ್ತೊಮ್ಮೆ ಖಂಡಿತವಾಗಿಯೂ ಬರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ವಿವೇಕ ಉದ್ಯೋಗ ಮೇಳದ ಗೌರವಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಉಪಾಧ್ಯಕ್ಷೆ ಡಾ.ಸುಧಾ ಎಸ್ ರಾವ್, ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ವಿವೇಕ ಉದ್ಯೋಗ ಏಳದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ, ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಉಪಾಧ್ಯಕ್ಷ ಅಶೋಕ್ ಕುಮಾರ್ ರೈ, ಉದ್ಯೋಗ ಮೇಳಕ್ಕೆ ಸಹಯೋಗ ನೀಡಿರುವ ರೂಮನ್ ಟೆಕ್ನಾಲಜಿಯ ನಿರ್ದೇಶಕ ಮನೀಶ್ ಮತ್ತಿತರರು ಉಪಸ್ಥಿತರಿದ್ದರು.