• 08251 236599
  • 08251 236444
  • vvsputtur@gmail.com

ಪುತ್ತೂರಿನಲ್ಲಿ ವಿವೇಕ ಉದ್ಯೋಗ ಮೇಳಕ್ಕೆ ಚಾಲನೆ ; ನೂತನ ಕಟ್ಟಡ ಲೋಕಾರ್ಪಣೆ

ದೇಶದ ಆರ್ಥಿಕತೆ ಹಾಗೂ ಆಡಳಿತಕ್ಕೊಂದು ಶಿಸ್ತು ಬಂದಿದೆ : ಡಿ.ವಿ.ಸದಾನಂದ ಗೌಡ

ಪುತ್ತೂರು: ಯಾವುದೇ ದೇಶ ಪ್ರಬಲವಾಗಿ ನಿರ್ಮಾಣವಾಗಭೇಕಾದರೆ ಅಲ್ಲಿನ ಆರ್ಥಿಕತೆ ಶಿಸ್ತಿನಿಂದ ಕೂಡಿರಬೇಕು ಹಾಗೂ ಸಮರ್ಥ ಆಡಳಿತ ವ್ಯವಸ್ಥೆ ಇರಬೇಕು. ಸುದೈವವಶಾತ್ ನಮ್ಮ ದೇಶಕ್ಕೆ ಈಗ ಇವೆರಡೂ ಲಭ್ಯವಾಗಿದೆ. ಭಾರತದಲ್ಲಿ ಯುವ ಶಕ್ತಿ ಅಪಾರವಾಗಿದ್ದರೂ ಅದರ ಸದ್ಬಳಕೆಯಲ್ಲಿ ಕಳೆದ ಆರೇಳು ದಶಕಗಳಿಂದ ವಿಫಲರಾಗಿದ್ದೇವೆ. ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿಯವರು ವಿಶೇಷ ಆಸ್ಥೆ ವಹಿಸಿ ಸರಿಯಾದ ಜಾಗದಲ್ಲಿ ಸರಿಯಾದ ಯುವಶಕ್ತಿಯನ್ನು ವಿನಿಯೋಗಿಸುವ ಕಾರ್ಯ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಅನುಷ್ಠಾನ ಖಾತೆಯ ಖಾತೆಯ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘವು ಶುಕ್ರವಾರ ವಿವೇಕಾನಂದ ಕ್ಯಾಂಪಸ್‌ನಲ್ಲಿ ಆಯೋಜಿಸಿದ ಬೃಹತ್ ಉದ್ಯೋಗ ಮೇಳ – 2017, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ನೂತನ ವಿಸ್ತೃತ ಕಟ್ಟಡ ಕೃಷ್ಣ ಚೇತನದ ಉದ್ಘಾಟನೆ ಹಾಗೂ ವಿವೇಕಾನಂದ ಪಾಲಿಟೆಕ್ನಿಕ್ ಸಂಸ್ಥೆಯ ಸೆಂಟರ್ ಫಾರ್ ಸ್ಕಿಲ್ ಅಂಡ್ ಎಂಟರ್‌ಪ್ರಿನರ್‌ಶಿಪ್ ಡೆವಲಪ್‌ಮೆಂಟ್ ಹಾಗೂ ಇಲೆಕ್ಟ್ರಾನಿಕ್ ಸ್ಕಿಲ್ ಟ್ರೈನಿಂಗ್ ಸೆಂಟರ್‌ಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

VU-2

VU-1

ಯುವಸಮೂಹದಲ್ಲಿ ಕೌಶಲ್ಯವೃದ್ಧಿ ಆಗಬೇಕಿದೆ. ಈ ಹಿನ್ನಲೆಯಲ್ಲಿ ಈಗಿನ ಕೇಂದ್ರ ಸರ್ಕಾರದಲ್ಲಿ ಕೌಶಲ್ಯಾಭಿವೃದ್ಧಿ ಸಚಿವಾಲಯವನ್ನೇ ಸೃಷ್ಟಿಸಲಾಗಿದೆ. ದುಡಿಯುವ ಕೈಗಳಿಗೆ ಸರಿಯಾದ ಉದ್ಯೋಗ ದೊರಕಬೇಕೆನ್ನುವುದೇ ಇದರ ಆಶಯ. 2020 ರ ವೇಳೆಗೆ ಸುಮಾರು ಐದುಕೋಟಿಗೂ ಮಿಕ್ಕ ಜನರನ್ನು ಇದರೊಳಗೆ ಸೇರಿಸಿಕೊಳ್ಳುವ ನಿರೀಕ್ಷೆ ಇದೆ. ಅಷ್ಟಲ್ಲದೆ ಇದಕ್ಕಾಗಿಯೇ ಸುಮಾರು 32 ಸಾವಿರ ಕೋಟಿ ಅನುದಾನವನ್ನು ನೀಡಲಾಗಿದೆ. ಈ ಸಚಿವಾಲಯವು ವಿದ್ಯಾರ್ಥಿಗಳಲ್ಲಿ ನೈಪುಣ್ಯತೆಯನ್ನು ಹೆಚ್ಚಿಸುವ ಕಾರ್ಯವನ್ನು ನಿರಂತರವಾಗಿ ನಡೆಸಲಿದೆ ಎಂದರು.

ಯುವಶಕ್ತಿ ಸ್ವಂತ ಸಾಧ್ಯತೆಯನ್ನು ಸಾಕಾರಗೊಳಿಸುವಂತಾಗಬೇಕು. ಅದಕ್ಕಾಗಿ ಆರ್ಥಿಕ ಬಲ ದೊರೆಯಬೇಕು ಎನ್ನುವ ಸದಾಶಯದೊಂದಿಗೆ ಮುದ್ರಾ ಬ್ಯಾಂಕ್ ಮೂಲಕ ಹತ್ತು ಲಕ್ಷದ ವರೆಗೆ ಸಾಲ ವಿತರಣೆ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಯುವಕರನ್ನು ಪ್ರೇರೇಪಿಸುವ, ಅವರಿಗೆ ಮತ್ತಷ್ಟು ಶಕ್ತಿಯನ್ನು ತುಂಬುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಸ್ವಾಮಿ ವಿವೇಕಾನಂದರು ಕನಸು ಕಂಡಂತೆ ಯುವ ಶಕ್ತಿಯ ಮೂಲಕ ಸದೃಢ ಭಾರತವನ್ನು ಕಟ್ಟುವ ಕೆಲಸ ಇದೀಗ ನಡೆಯುತ್ತಿದೆ ಎಂದು ನುಡಿದರು.

VU-3

ವಿವೇಕಾನಂದ ಉದ್ಯೋಗ ತರಬೇತಿ ಹಾಗೂ ಮಾಹಿತಿ ಕೇಂದ್ರವನ್ನು ಉದ್ಘಾಟಿಸಿ, ಶುಭಾಷಯದ ಮಾತುಗಳನ್ನಾಡಿದ ಮಂಗಳೂರು ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಆಧ್ಯಾತ್ಮಿಕತೆಯ ಆಧಾರದಲ್ಲಿ ದೇಶ ಮುನ್ನಡೆಯಬೇಕೆಂಬ ದೃಷ್ಟಿಯನ್ನು ಕೊಟ್ಟ ದೀನದಯಾಳ್ ಉಪಾಧ್ಯಾಯರ ಹೆಸರಿನಲ್ಲಿ ಗ್ರಾಮೀಣ ಉದ್ಯೋಗ ಕೌಶಲ್ಯ ಯೋಜನೆಯನ್ನು ಆರಂಭಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುದ್ರಾ ಬ್ಯಾಂಕ್‌ನಡಿ 47 ಸಾವಿರದ 200 ಮಂದಿಗೆ ಸಾಲ ವಿತರಿಸಲಾಗಿದೆ ಮಾತ್ರವಲ್ಲದೆ ಸ್ಟಾರ್ಟ್ ಅಪ್ ಯೋಜನೆಯಡಿ ನಾಲ್ಕೂವರೆ ಕೋಟಿ ಹಣವನ್ನು ಸಾಲ ರೂಪದಲ್ಲಿ ನೀಡಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾತನಾಡಿ ಮೊದಲ ಬಾರಿಗೆ ದೇಶವನ್ನು ಅರ್ಥ ಮಾಡಿಕೊಂಡ ವ್ಯಕ್ತಿಯೊಬ್ಬ ನಾಯಕನಾಗಿ ದೊರಕಿದ್ದಾರೆ. ಮಾತ್ರವಲ್ಲದೆ ಪ್ರಪಂಚದಾದ್ಯಂತ ಈ ದೇಶದ ಶ್ರೇಷ್ಟತ್ವವನ್ನು ಬಿಂಬಿಸುತ್ತಿದ್ದಾರೆ. ಹೀಗಿರುವಾಗ ನಮ್ಮ ಯುವ ಶಕ್ತಿಯನ್ನು ಸರಿಯಾದ ರೀತಿಯಲ್ಲಿ ತಯಾರು ಮಾಡಬೇಕಾದ, ಅವರಿಗೊಂದು ಹಾದಿ ತೋರಬೇಕಾದ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಉದ್ಯೋಗ ಮೇಳ ರೂಪು ಪಡೆದಿದೆ. ಈ ಉದ್ಯೋಗ ಮೇಳಕ್ಕೆ ಅದ್ಭುತ ಪ್ರತಿಕ್ರಿಯೆ ಬಂದಿದೆ. ಹಾಗಾಗಿ ಇದನ್ನು ಮುಂದಿನ ದಿನಗಳಲ್ಲೂ ಆಯೋಜಿಸುವ ಚಿಂತನೆ ಇದೆ ಎಂದರು.

VU-4

VU-6

VU-7

ವೇದಿಕೆಯಲ್ಲಿ ಭಾರತ ಸರ್ಕಾರದ ಐಟಿ ಮತ್ತು ವಿದ್ಯುನ್ಮಾನ ವಲಯದ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಡಾ.ವಿಜಯ ಕುಮಾರ್, ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ನಿರ್ದೇಶಕ ರೋಹಿತ್ ಮೆಹ್ತಾ, ಭಾರತ ಸರ್ಕಾರದ ಇಲೆಕ್ಟ್ರಾನಿಕ್ ಸ್ಕಿಲ್ ಟ್ರೈನಿಂಗ್ ಸೆಂಟರ್‌ನ ಪಶ್ಚಿಮ ವಲಯ ನಿರ್ದೇಶಕ ಶ್ರೀನಿವಾಸ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಸತೀಶ್ ರಾವ್, ಸಂಚಾಲಕ ರಾಧಾಕೃಷ್ಣ ಭಕ್ತ, ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ, ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರಸನ್ನ ಎನ್, ಸಂಚಾಲಕ ಮಹಾದೇವ ಶಾಸ್ತ್ರಿ, ಪ್ರಾಂಶುಪಾಲ ಗೋಪಿನಾಥ ಶೆಟ್ಟಿ, ವಿವೇಕ ಉದ್ಯೋಗ ಮೇಳಕ್ಕೆ ಸಹಯೋಗ ಒದಗಿಸಿದ ಬೆಂಗಳೂರಿನ ರೂಮನ್ ಟೆಕ್ನಾಲಜಿಯ ಮನೀಶ್ ಉಪಸ್ಥಿತರಿದ್ದರು.

ವಿವೇಕ ಉದ್ಯೋಗ ಮೇಳ ಸಮಿತಿಯ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ವಂದಿಸಿದರು. ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ವಿಜಯ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು.

Highslide for Wordpress Plugin