• 08251 236599
  • 08251 236444
  • vvsputtur@gmail.com

ಶತಮಾನೋತ್ಸವ – ವಿವೇಕಾನಂದ ಜಯಂತಿ ಆಚರಣೆ ಪತ್ರಿಕಾಗೋಷ್ಠಿ

ಪುತ್ತೂರು : 1900 ನೇ ಇಸವಿಯ ಹೊತ್ತಿಗೆ ಶಿಕ್ಷಣದ ಮಹತ್ವವನ್ನರಿತ ಅನೇಕ ಮಂದಿ ಶೈಕ್ಷಣಿಕ ರಂಗವನ್ನು ಪ್ರವೇಶಿಸಿದ್ದು, ಹತ್ತು ಹಲವು ಸ್ಥಳೀಯ ಶಾಲೆಗಳನ್ನು ಆರಂಭಿಸಿದ್ದು, ಶಿಕ್ಷಣದ ಮೂಲಕವೇ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದು ಮನಗಂಡದ್ದೆಲ್ಲ ಇತಿಹಾಸದಲ್ಲಿ ಮಹತ್ವದ ದಾಖಲೆಯಾಗಿ ಲಭ್ಯವಾಗುತ್ತದೆ. ಹೀಗೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಹೊರಟವರಿಗೆ ಮಾರ್ಗದರ್ಶಿ ಸಂಸ್ಥೆಯಾಗಿ ಒಂದು ವಿದ್ಯಾಪ್ರಸಾರಕ ಕೇಂದ್ರವನ್ನು ಆರಂಭಿಸುವುದು ಅಗತ್ಯ ಎಂದು ಆ ಸಂದರ್ಭದಲ್ಲಿ ಅನೇಕ ಹಿರಿಯರು ಮನಗಂಡರು. ಇದರ ಪರಿಣಾಮವಾಗಿ 1915 ರ ಹೊತ್ತಿಗೆ ಪುತ್ತೂರು ಎಜುಕೇಶನ್ ಸೊಸೈಟಿ(ಈಗಿನ ವಿವೇಕಾನಂದ ವಿದ್ಯಾವರ್ಧಕ ಸಂಘ) ಅಸ್ಥಿತ್ವಕ್ಕೆ ಬಂತು. ಈ ಕೇಂದ್ರದ ಅಡಿಯಲ್ಲಿ 1961 ರಲ್ಲಿ ಪುತ್ತೂರಿನಲ್ಲಿ ಶಾಲೆಯೊಂದನ್ನು ಆರಂಭಿಸಲಾಯಿತು. ೧೯೨೧ರಲ್ಲಿ ಆ ಶಾಲೆಯನ್ನು ಡಿಸ್ಟ್ರಿಕ್ ಬೋರ್ಡ್‌ಗೆ ಹಸ್ತಾಂತರಿಸಲಾಯಿತಾದರೂ ಪ್ರತೀ ವರ್ಷ ವಿದ್ಯಾರ್ಥಿ ವೇತನ ನೀಡುವುದರೊಂದಿಗೆ ಪುತ್ತೂರು ಎಜುಕೇಶನ್ ಸೊಸೈಟಿ ಅಸ್ಥಿತ್ವದಲ್ಲಿ ಉಳಿಯಿತೆನ್ನುವುದು ಗಮನಾರ್ಹ ವಿಚಾರ. ತದನಂತರ 1965 ರಲ್ಲಿ ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜನ್ನು ಆರಂಭಿಸುವುದರೊಂದಿಗೆ ಈ ಕೇಂದ್ರ ಮತ್ತೊಮ್ಮೆ ಸಮಾಜಮುಖಕ್ಕೆ ಕಾಣಿಸಿಕೊಂಡಿತು. ನಂತರ ನಡೆದದ್ದು ಈಗ ಬಹುದೊಡ್ಡ ಬಹುದೊಡ್ಡ ಚಾರಿತ್ರಿಕ ದಾಖಲೆಯೇ ಸರಿ. ಪ್ರಸ್ತುತ 51 ಶಿಕ್ಷಣ ಸಂಸ್ಥೆಗಳನ್ನು ತನ್ನ ತೆಕ್ಕೆಯಲ್ಲಿ ಮುನ್ನಡೆಸುತ್ತಿರುವ ಈ ಬೃಹತ್ ವಿವೇಕಾನಂದ ವಿದ್ಯಾವರ್ಧಕ ಸಂಘ ಇಂದು ಅನೇಕ ಸಾಮಾಜಿಕ, ಸಾಂಸ್ಕೃತಿಕ, ಸಂಸ್ಕಾರಭರಿತ ಕೆಲಸ ಕಾರ್ಯಗಳೊಂದಿಗೆ ಮನೆಮಾತಾಗಿದೆ. ಇಂತಹ ಮಹತ್ತರವಾದ ವಿದ್ಯಾಪ್ರಸಾರಕ ಕೇಂದ್ರಕ್ಕೆ ಇದೀಗ ನೂರರ ಸಂಭ್ರಮ.

ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯ ಸಾಮಾಜಿಕ ಪರಿವರ್ತನೆಯಿಂದ ಪ್ರಗತಿ ಸಾಧನೆ. ಇಲ್ಲಿನ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಪರಂಪರೆಯನ್ನೊಳಗೊಂಡ ಶುದ್ಧ, ಸರಳ ಮತ್ತು ಆಧುನಿಕ ಶಿಕ್ಷಣವನ್ನು ನೀಡುವುದಲ್ಲದೆ ವಿದ್ಯಾರ್ಥಿ ಸಮೂಹದಲ್ಲಿ ನಿಸ್ವಾರ್ಥ, ಶ್ರದ್ಧಾಪೂರ್ಣ, ರಾಷ್ಟ್ರ ಸೇವೆಯ ಚೈತನ್ಯವನ್ನು ಉದ್ದೀಪನಗೊಳಿಸುವುದಾಗಿದೆ. ಅಲ್ಲದೆ ಯುವಜನಾಂಗದಲ್ಲಿ ಶ್ರೇಷ್ಠತಮ ಶೀಲ ಸಂವರ್ಧನೆಯನ್ನು ಮೈಗೂಡಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ಒಳ್ಳೆಯ ನಡತೆ, ಉತ್ತಮ ಹವ್ಯಾಸ-ಸದಭಿರುಚಿಗಳ ಬೆಳವಣಿಗೆಗೆ ಮಾರ್ಗದರ್ಶನ ನೀಡುವುದಾಗಿದೆ.

ಶತಮಾನೋತ್ಸವ:

ಯಾವುದೇ ಸಂಸ್ಥೆಗಾದರೂ ನೂರರ ಹರಯ ಅತ್ಯಂತ ಸಂಭ್ರಮದ ಮಾತ್ರವಲ್ಲದೆ ಐತಿಹಾಸಿಕ ಕಾಲಘಟ್ಟವೇ ಆಗಿರುತ್ತದೆ. ಅಂತೆಯೇ ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೂ ಈಗ ಅಂತಹದ್ದೇ ಅನುಭವ. ಸಂಸ್ಕಾರಯುತ ಶಿಕ್ಷಣ ಕೇಂದ್ರಿತ ಈ ಸಂಘಟನೆಯ ಬೆಳವಣಿಗೆಯಲ್ಲಿ ಊರವರ, ಹೆತ್ತವರ, ವಿದ್ಯಾರ್ಥಿಗಳ, ಹಿರಿಯ ವಿದ್ಯಾರ್ಥಿಗಳ, ಉಪನ್ಯಾಸಕ, ಉಪನ್ಯಾಸಕೇತರ ವೃಂದದ ಜತೆಗೆ ಆಡಳಿತ ಮಂಡಳಿಯ ಪಾತ್ರ ಗಮನಾರ್ಹವಾದದ್ದು. ಪ್ರಸ್ತುತ, ಶತಮಾನೋತ್ಸವದ ಹಿನ್ನಲೆಯಲ್ಲಿ ಅನೇಕಾನೇಕ ಬದಲಾವಣೆಗಳು, ಬೆಳವಣಿಗೆಗಳು ನಡೆಯುತ್ತಿವೆ. ೨೦೧೬ರ ಜನವರಿ ೧೨ನೆಯ ತಾರೀಕಿನಂದು ನಡೆಯಲಿರುವ ಶತಮಾನೋತ್ಸವ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ಜಾರಿಯಲ್ಲಿದೆ.

ವಿವೇಕಾನಂದ ಜಯಂತಿ :

ಶತಮಾನೋತ್ಸವ ಕಾರ್ಯಕ್ರಮ ವಿವೇಕಾನಂದ ಜಯಂತಿಯಂದೇ ನೆರವೇರಬೇಕೆಂಬುದು ಹಿರಿಯರ ಹಾಗೂ ಅನೇಕರ ಆಶಯವಾಗಿತ್ತು. ಈ ಹಿನ್ನಲೆಯಲ್ಲಿ ವಿವೇಕಾನಂದ ಜಯಂತಿಯ ಆಚರಣೆಯಂದೇ ಶತಮಾನೋತ್ಸವವೂ ಜರಗಲಿವೆ. ವಿವೇಕಾನಂದ ಜಯಂತಿಯ ಆಚರಣೆಯೂ ವಿಜೃಂಬಣೆಯಿಂದ ಸಾಕಾರಗೊಳ್ಳಲಿದೆ.

25 ಸಾವಿರ ಮಂದಿಯ ನಿರೀಕ್ಷೆ – ವಿರಾಟ್ ವಿವೇಕ ಸಂಗಮ:

ಈ ಒಂದು ಅಭೂತಪೂರ್ವ ಕಾರ್ಯಕ್ರಮದಂದು ವಿವೇಕಾನಂದ ವಿದ್ಯಾವರ್ಧಕ ಸಂಘವೆಂಬ ಬೃಹತ್ ಆಲದ ಮರದ ಆಶ್ರಯದಲ್ಲಿ ಆಸರೆ ಹೊಂದಿರುವ ಎಲ್ಲಾ 51 ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು, ಅಧ್ಯಾಪಕ – ಅಧ್ಯಾಪಕೇತರ ವೃಂದ, ಹೆತ್ತವರು, ಆಡಳಿತ ಮಂಡಳಿ ಮಾತ್ರವಲ್ಲದೆ ಶಿಕ್ಷಣಾಭಿಮಾನಿಗಳು, ಊರವರು ಭಾಗಿಯಾಗಲಿದ್ದಾರೆ. ಸುಮಾರು 25 ಸಾವಿರ ಮಂದಿಯ ನಿರೀಕ್ಷೆಯಿದೆ. ವ್ಯವಸ್ಥೆಯ ದೃಷ್ಟಿಯಿಂದ ಈಗಾಗಲೇ ಅನೇಕ ತಂಡಗಳು ಸಿದ್ಧಗೊಂಡಿವೆ. ಉಪಹಾರ, ಶಿಸ್ತು, ನೈರ್ಮಲ್ಯ, ವಾಹನ ವ್ಯವಸ್ಥೆ, ಆಸನ ವ್ಯವಸ್ಥೆ, ಸ್ವಯಂ ಸೇವಕರು, ನೀರಿನ ವ್ಯವಸ್ಥೆ, ಆಮಂತ್ರಣ ಪತ್ರಿಕೆ, ಕಾರ್ಯಕ್ರಮ ನಿರ್ವಹಣೆ ಹೀಗೆ ಅನೇಕಾನೇಕ ಉಪ ವಿಭಾಗಗಳಿಗಾಗಿ ತಂಡಗಳು ಸಿದ್ಧಗೊಂಡಿವೆ. ಈ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿನ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಿದ ಹಿರಿಯ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಕೇಳಿಕೊಳ್ಳಲಾಗಿದೆ. ಅಂತೆಯೇ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರೂ ಭಾಗಿಯಾಗಬೇಕೆಂಬುದು ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶಯ.

Highslide for Wordpress Plugin