ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ) ವತಿಯಿಂದ ಶಿಕ್ಷಣ ಸಂಸ್ಥೆಗಳ ಮೂಲಕ ನಡೆಯುತ್ತಿರುವ ಗ್ರಾಮ ವಿಕಾಸ ಚಟುವಟಿಕೆಗಳ ಅವಲೋಕನಾ ಸಭೆ ದಿನಾಂಕ 30 ಅಕ್ಟೋಬರ್ 2021, ಶನಿವಾರದಂದು ವಿವೇಕಾನಂದ ಪದವಿ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು. 35 ಗ್ರಾಮಗಳಿಂದ 76 ಗ್ರಾಮಸ್ತರು ಸೇರಿದಂತೆ 137 ಪ್ರತಿನಿಧಿಗಳು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ‘ನಮ್ಮ ಗ್ರಾಮಗಳಲ್ಲಿರುವ ಶ್ರೇಷ್ಠವಾದ ಪರಂಪರೆ ಮತ್ತು ಜ್ಞಾನವನ್ನು ಉಳಿಸಿಕೊಳ್ಳಬೇಕಾಗಿದೆ. ಗ್ರಾಮವಿಕಾಸ ಯೋಜನೆಯೆಂಬ ಚಿಂತನೆಯು ಸಮಾಜದ ಅಭಿವೃದ್ಧಿಯಲ್ಲಿ ಜನರನ್ನು ತೊಡಗಿಸಿಕೊಳ್ಳುವ ಚಿಂತನೆಯಾಗಿದೆ. ಗ್ರಾಮಗಳಲ್ಲಿ ಇರುವ ಕುಂದು-ಕೊರತೆಗಳನ್ನು ಪಟ್ಟಿ ಮಾಡಿ ಅವುಗಳ ನಿವಾರಣೆಗೆ ಜನರನ್ನು ತಂಡಗಳನ್ನಾಗಿ ಮಾಡಿಕೊಂಡು ಶ್ರಮಿಸುವ ಅಗತ್ಯವಿದೆ’ ಎಂದರು. ಸಂಘದ ಕಾರ್ಯದರ್ಶಿ ಡಾ| ಕೆ. ಯಂ. ಕೃಷ್ಣ ಭಟ್ ಪ್ರಸ್ತಾವಿಕ ಮಾತನಾಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಶ್ರೀ ಅಚ್ಯುತಾ ನಾಯಕ್, ವಿಶೇಷಾಧಿಕಾರಿ ವೆಂಕಟೇಶ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಗ್ರಾಮವಿಕಾಸ ಮಂಗಳೂರು ವಿಭಾಗ ಸಂಯೋಜಕ ಶ್ರೀನಿವಾಸ ಉಬರಡ್ಕ, ಪ್ರಮುಖ್ ಪ್ರಶಾಂತ್ ಅವಧಿಗಳನ್ನು ನಡೆಸಿಕೊಟ್ಟರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಗ್ರಾಮವಿಕಾಸ ಯೋಜನೆಯ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಬಾಲಕೃಷ್ಣ ಕಿಣಿಯವರು ಸಮಾರೋಪ ಭಾಷಣ ಮಾಡಿದರು.